ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು – ಹೈ ಕೋರ್ಟ್ ತೀರ್ಪು
ಬೆಂಗಳೂರು: “ಪರ ಪುರುಷನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಬೇಸರಗೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಲ್ಲಿ ಪತ್ನಿಯನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯ ಆತ್ಮಹತ್ಯೆಗೆ ಪ್ರಚೋದಿಸಿದ ಅಪರಾಧದಡಿ ತಮಗೆ ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿವಾಸಿಗಳಾದ ಪ್ರೇಮಾ ಮತ್ತು ಬಸವಲಿಂಗೇಗೌಡ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಅಲ್ಲದೆ, ನಿರ್ದಿಷ್ಟ ಕೆಲಸವನ್ನು ಮಾಡುವಂತೆ ಪ್ರಚೋದನೆ ನೀಡುವುದನ್ನು ಪ್ರಚೋದನೆ ಎನ್ನಲಾಗುತ್ತದೆ. ಆಗ ಮಾತ್ರ ಅದು ಪ್ರಚೋದನೆ ಅಪರಾಧವಾಗುತ್ತದೆ. ಮೇಲ್ಮನವಿ ಸಲ್ಲಿಸಿರುವ ಆರೋಪಿಗಳು ಅಕ್ರಮ ಸಂಬಂಧ ಹೊಂದಿರುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ.
ಅಲ್ಲದೆ ವ್ಯಕ್ತಿ ಆತ್ಮಹತ್ಯೆಗೆ ಪ್ರಚೋದನೆ ನೀಡುವುದನ್ನು ತೋರಿಸಲು ಅರ್ಜಿದಾರ ಆರೋಪಿಗಳು ನಿರ್ದಿಷ್ಟ ನಡೆ ಪ್ರದರ್ಶಿಸಿರುವುದಕ್ಕೆ ನಿಖರ ಸಾಕ್ಷ್ಯಗಳು ಇರಬೇಕಾಗುತ್ತದೆ. ಇಲ್ಲವಾದರೆ ಆತ್ಮಹತ್ಯೆಗೆ ಪ್ರಚೋದನೆ ಅಪರಾಧವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಕ್ರಿಮಿನಲ್ ಮೇಲ್ಮನವಿ ಅರ್ಜಿದಾರರ ಪರ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ವಾದ ಮಂಡಿಸಿದರು.