NEWSನಮ್ಮಜಿಲ್ಲೆಬೆಂಗಳೂರು

ರಾಜಕಾಲುವೆ ರಕ್ಕಸರ ವಿರುದ್ಧ ಕ್ರಮ ಜರುಗಿಸುವ ದಮ್ಮು ತಾಕತ್ತು ನಿಮಗೆ ಇದೆಯಾ ಡಿಕೆಶಿ ಅವರೇ: ಕೇಂದ್ರ ಸಚಿವ ಎಚ್‌ಡಿಕೆ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿಗೆ ಭೇಟಿ ಕೊಟ್ಟು ಮಳೆ, ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿರುವುದೇನೋ ಸರಿ. ಆದರೆ, ಅವರ ಭೇಟಿ ಪ್ರವಾಹ ವೀಕ್ಷಣೆಗೋ ಅಥವಾ ರಾಜಕಾಲುವೆ ರಕ್ಕಸರ ರಕ್ಷಣೆಗೋ..? ಎಂದೂ ಬೆಂಗಳೂರು ಮಹಾಜನತೆಗೆ ಬೆಂಗಳೂರು ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ Xಮಾಡಿರುವ ಅವರು, ಡಿಸಿಎಂ ಅವರು ಪಾದಸ್ಪರ್ಶ ಮಾಡಿದ್ದ ರಾಜಕಾಲುವೆ ಪುನೀತವಾಗಿರಬೇಕು!! ಪಾಪ.. ಅದೇ ರಾಜಕಾಲುವೆ ಮೇಲೆ ಬೃಹದಾಕಾರವಾಗಿ ಎದ್ದು ನಿಂತಿರುವ ‘ಭಾರೀ ಆಸಾಮಿ’ಯೊಬ್ಬರ ಕಟ್ಟಡ ಅವರ ಕಣ್ಣಿಗೆ ಕಾಣಲಿಲ್ಲವೆ? ರಾಜಾರೋಷವಾಗಿ ರಾಜಕಾಲುವೆಯನ್ನು ಮುಕ್ಕಿ ತಿಂದಿರುವ ಆಸಾಮಿಯ ಬಗ್ಗೆ ಅವರು ಚಕಾರವನ್ನೇ ಎತ್ತಲಿಲ್ಲ!! ಕೊನೆಪಕ್ಷ ಅವರ ಹೆಸರನ್ನೂ ಹೇಳಲಿಲ್ಲ ಎಂದು ಏಕೆ ಎಂದು ತಿವಿದಿದ್ದಾರೆ.

ರಾಜಕಾಲುವೆಗಳ ಮೇಲೆ ಐಷಾರಾಮಿ ಸೌಧಗಳನ್ನು ಕಟ್ಟಿಕೊಂಡು ಕೋಟಿ ಕೋಟಿ ದುಡಿಯುತ್ತಿರುವ ರಾಜಕಾಲುವೆ ರಕ್ಕಸರ ವಿರುದ್ಧ ಕ್ರಮ ಜರುಗಿಸುವ ದಮ್ಮು ತಾಕತ್ತು ನಿಮಗೆ ಇದೆಯಾ ಡಿ.ಕೆ. ಶಿವಕುಮಾರ್ ಅವರೇ?

ಹೋಗಲಿ, ಅಂಥವರ ವಿರುದ್ಧ ಕ್ರಮ ಜರುಗಿಸಲು ನಿಮ್ಮ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ, ಅಧಿಕಾರ ನೀಡಿದ್ದೀರಾ? ಒಂದು ವೇಳೆ ನೀಡಿದ್ದರೆ ಆ ಅಕ್ರಮ ಕಟ್ಟಡಗಳು ಇನ್ನೂ ಯಾಕೆ ಹಾಗೆಯೇ ಇವೆ? ಎಂಬುದನ್ನು ನೀವು ಹೇಳಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನೀವು ಕುರ್ಚಿ ಮೇಲೆ ಕೂತು ಎರಡು ವರ್ಷವೇ ಆಯಿತು. ಅದೆಷ್ಟೋ ಬಾರಿ ಸಾಯಿ ಬಡಾವಣೆ ಮುಳುಗಿದ್ದೂ ಆಯಿತು, ತೇಲಿದ್ದೂ ಆಯಿತು! ನಿಮ್ಮಿಂದ ಆಗಲಿ ಅಥವಾ ಸರಕಾರದಿಂದ ಆಗಲಿ ಯಾವುದೇ ಪರಿಹಾರ ಸಿಗಲಿಲ್ಲ! ಬಡಾವಣೆಯ ಜನರು ನರಳುತ್ತಿರುವುದು ಮಾತ್ರ ತಪ್ಪಿಲ್ಲ. ಈ ಅಸಡ್ಡೆ ಯಾಕೆ? ಇವರೆಲ್ಲ ತೆರಿಗೆ ಕಟ್ಟುತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವಿಜಯಪಥ - vijayapatha
Megha
the authorMegha

Leave a Reply

error: Content is protected !!