
ಬೆಂಗಳೂರು: ಇಪಿಎಸ್ ಪಿಂಚಣಿದಾರರ 89ನೇ ಮಾಸಿಕ ಸಭೆ ಲಾಲ್‌ಬಾಗ್ ಆವರಣದಲ್ಲಿ ಭಾನುವಾರ ಯಶಸ್ವಿಯಾಗಿ ಜರುಗಿತು. ಬೆಳಗಿನ ನಿರ್ಮಲ ವಾತಾವರಣದಲ್ಲಿ, ಲಾಲ್‌ಬಾಗ್ ನಡಿಗೆದಾರರ ಜತೆ ಹೆಜ್ಜೆ ಹಾಕುತ್ತಾ, ತನ್ನ ಸಹಪಾಠಿಗಳನ್ನು ಕಂಡೊಡನೆ, ಎಲ್ಲಿಲ್ಲದ ನವೊಲ್ಲಾಸದಿಂದ, ಈ ಸುಂದರ ತಾಣದಲ್ಲಿ ಸಮಯ ಕಳೆದಿದ್ದೆ ನಿವೃತ್ತ ನೌಕರರಿಗೆ ತಿಳಿಯಲೇ ಇಲ್ಲ.
ಇನ್ನು ಸಂಘಟನಾ ಕಾರ್ಯದರ್ಶಿ ಮನೋಹರ್ ಅವರು ಎಲ್ಲ ಇಪಿಎಸ್ ನಿವೃತ್ತರು ಹಾಗೂ ಮುಖಂಡರಿಗೆ ಸ್ವಾಗತ ಬಯಸುವ ಮೂಲಕ ಮಾಸಿಕ ಸಭೆಗೆ ಚಾಲನೆ ನೀಡಿದರು.
ಇಪಿಎಸ್ ನಿವೃತ್ತರು ದಶಕದಿಂದ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದರೂ ಸಹ ಕೇಂದ್ರ ಸರ್ಕಾರ ಕಿವಿಗೊಡದೆ ಇರುವುದು, ಅತ್ಯಂತ ದುರಂತದ ಸಂಗತಿ ಎಂದು ಸಂಘದ ಅಧ್ಯಕ್ಷ ನಂಜುಂಡೇಗೌಡ ಸಭೆಯಲ್ಲಿ ಪ್ರಸ್ತಾಪಿಸಿ, ಮುಂಬರುವ ಪಾರ್ಲಿಮೆಂಟ್‌ನ ಮುಂಗಾರು ಅಧಿವೇಶನದಲ್ಲಿ ನಮ್ಮ ರಾಜ್ಯದ ಸಂಸದರು ಧ್ವನಿಯೆತ್ತಲೇ ಬೇಕು ಎಂದು ಸಭೆಯ ಮೂಲಕ ಆಗ್ರಹಿಸಿದರು. ಏನೇ ಆಗಲಿ 78ಲಕ್ಷ ಇಪಿಎಸ್ ನಿವೃತ್ತರ ಪರ ನಡೆಸುತ್ತಿರುವ ಈ ಹೋರಾಟಕ್ಕೆ ಇಂದಲ್ಲ ನಾಳೆ ಜಯ ಶತಸಿದ್ಧ ಎಂದು ಹೇಳಿದರು.
ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ನಮ್ಮ ಹೋರಾಟ ಇಷ್ಟಕ್ಕೆ ಮುಗಿಯುವುದಿಲ್ಲ, ಕಮಾಂಡರ್ ಅಶೋಕ್ ರಾಹುತ್ ಅವರು ಪ್ರತಿಪಾದಿಸುತ್ತಿರುವ ಕನಿಷ್ಠ ಹೆಚ್ಚುವರಿ ಪಿಂಚಣಿ ರೂ. 7500 ಜತೆಗೆ ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ಇವೆಲ್ಲವೂ ನಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುವವರೆಗೆ ಈ ಹೋರಾಟ ನಿಲ್ಲದು ಎಂದು ಹೇಳಿದರು.
ಇನ್ನು ನಮ್ಮ ಮುಖಂಡರ ಜತೆ ಕೇಂದ್ರ ಸರ್ಕಾರವು ಇತ್ತೀಚೆಗೆ ದೆಹಲಿಯಲ್ಲಿ ಪಿಂಚಣಿ ವಿವಾದಕ್ಕೆ ಸಂಬಂಧಿಸಿದಂತೆ ನಡೆಸಲು ಉದ್ದೇಶಿಸಿದ್ದ ಮಾತುಕತೆ ನಡೆಯದೆ ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು, ನಾವೆಲ್ಲರೂ “ದೆಹಲಿ ಯಾತ್ರೆ” ಕೈಗೊಳ್ಳುವುದು ಒಂದೇ ಮಾರ್ಗ, ರೈತ ಚಳವಳಿಯ ಮಾದರಿಯಲ್ಲಿ ನಮ್ಮ ಹೋರಾಟವನ್ನು ಮಾಡಬೇಕು. ಯಾರೊಬ್ಬರೂ ಮನೆಯಲ್ಲಿ ಕುಳಿತುಕೊಳ್ಳದೆ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತರು ನಮ್ಮ ಎಲ್ಲ ಸಭೆಗಳಿಗೂ ಆಗಮಿಸಿ, ನಮಗೆ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ನಾಗರಾಜ, ರುಕ್ಮೇಶ್, ಕೃಷ್ಣಮೂರ್ತಿ ಹಾಗೂ ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ, ನಿವೃತ್ತ ನೌಕರರ ಟ್ರಸ್ಟ್ ಖಜಾಂಚಿ ರಮೇಶ್ ಭಾಗವಹಿಸಿದ್ದು, ಸಭೆಯ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು. ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿದರು.
Related









