ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿದಲ್ಲಿ ಮೃತಪಟ್ಟ 11 ಜನರ ಮಾಹಿತಿ ಸಿಕ್ಕಿದೆ.
ಕಾಲ್ತುಳಿತಕ್ಕೆ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯಕಂಡಿದ್ದಾರೆ. ಕನಕಶ್ರೀ ಲೇಔಟ್‌ನಲ್ಲಿ ವಾಸವಿದ್ದ 9ನೇ ತರಗತಿ ವಿದ್ಯಾರ್ಥಿನಿ ದಿವ್ಯಾನ್ಷಿ ( 14) ಎಂಬಾಕೆ ಮೃತಪಟ್ಟಿದ್ದು, ಈಕೆ ಶಿವಕುಮಾರ್, ಆಶ್ವಿನಿ ದಂಪತಿಯ ಪುತ್ರಿ. ಬುಧವಾರ ಮಧ್ಯಾಹ್ನ ತಾಯಿ ಅಶ್ವಿನಿ , ಚಿಕ್ಕಮ್ಮ ರಚನಾ, ದಿವ್ಯಾನ್ಷಿ ಸೇರಿದಂತೆ 4 ಮಂದಿ ಸ್ಟೇಡಿಯಂ ಬಳಿ ಹೋಗಿದ್ದರು. ಈ ವೇಳೆ ಕಾಲ್ತುಳಿತವಾಗಿ ದಿವ್ಯಾನ್ಷಿ ಅಸುನೀಗಿದಳು.
ಯಲಹಂಕ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಶಿವು (17) ಎಂಬ ಬಾಲಕ ಮೃತಪಟ್ಟಿದ್ದಾನೆ. ಯಾದಗಿರಿ ಮೂಲದ ಈತನ ಕುಟುಂಬ ಕಣ್ಣೂರಿನಲ್ಲಿ ವಾಸವಾಗಿತ್ತು. ಈತನ ತಂದೆ ತಾಯಿ ಇಬ್ಬರು ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಕಾಲ್ತುಳಿತಕ್ಕೆ ಟೆಕ್ಕಿ ಬಲಿ: ಅಮೇಜಾನ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ದೇವಿ (25) ಎಂಬವರು ಸಾವನ್ನಪ್ಪಿದ್ದಾರೆ. ಮೂಲತಃ ತಮಿಳುನಾಡಿನ ನಿವಾಸಿಯಾಗಿದ್ದ ಅವರು, ಮಾರತ್ ಹಳ್ಳಿ ಬಳಿ ಪಿಜಿಯಲ್ಲಿ ವಾಸವಾಗಿದ್ದರು. ಇವರು ತಂದೆ ತಾಯಿಗೆ ಒಬ್ಬಳೇ ಮಗಳು. ತಂದೆ, ತಾಯಿ ಇಬ್ಬರಿಗೂ ವಯಸ್ಸಾಗಿದ್ದು ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು.
ಕೋಲಾರದ ಇಂಜಿನಿಯರ್: ಬೆಂಗಳೂರಿನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ಕೋಲಾರದ ಯುವತಿ ಸಹನಾ (24) ಕಾಲ್ತುಳಿತದಲ್ಲಿ ಕೊನೆಯುಸಿರೆಳೆದಿದ್ದಾಳೆ. ಈಕೆ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದವರಾಗಿದ್ದರು. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಶಿಕ್ಷಕ ದಂಪತಿ ಸುರೇಶ ಬಾಬು ಮತ್ತು ಮಂಜುಳಾ ಅವರ ಪುತ್ರಿ ಎಂದು ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರದ ಪೂರ್ಣಚಂದ್ರ ಎಂಬವರು ಮೃತಪಟ್ಟಿದ್ದಾರೆ. ಇವರು ಸಿವಿಲ್ ಇಂಜಿನಿಯರಿಂಗ್ ಮುಗಿಸಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ವಿವಾಹ ಸಂಬಂಧ ಹೆಣ್ಣು ನೋಡಲು ಹೋಗಿ ಅಲ್ಲಿಂದ ಮನೆಗೆ ಬರದೆ ಬೆಂಗಳೂರಿಗೆ ಬಂದಿದ್ರು. ಆದರೆ ವಾಪಸ್ ಮನೆಗೆ ಹೋಗಿದ್ದು ಹೆಣವಾಗಿ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಾಸನ ಜಿಲ್ಲೆಯ ಬೇಲೂರಿನ ಭೂಮಿಕ್ ಎಂಬಾತ ಕೂಡ ಈ ಘಟನೆಯಲ್ಲಿ ಮೃತಪಟ್ಟಿದ್ದಾನೆ. ಇವರು ಬೆಂಗಳೂರಿನ 8ನೇ ಮೈಲಿಯ ಸೌಂದರ್ಯ ಕಾಲೇಜಿನ ಬಳಿ ವಾಸವಾಗಿದ್ದರು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿನ್ಮಯಿ (19) ಎಂಬಾತ ಅಸುಣಿಗಿದ್ದು, ಆರು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ದಿಯಾ (26), ಶ್ರವಣ್ (21), ಮನೋಜ್ ಎಂಬವರು ಮೃತಪಟ್ಟಿದ್ದಾರೆ.
ಒಟ್ಟಾರೆ 11 ಜನ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ ನಮ್ಮ ಮಕ್ಕಳೇ ಇಲ್ಲ ಎಂದ ಮೇಲೆ ಆ ಹಣ ತೆಗೆದುಕೊಂಡು ಏನು ಮಾಡುವುದು ಎಂದು ಮೃತರ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Related

 










