ಮಂಗಳೂರು: ಆಳಸಮುದ್ರದಲ್ಲಿ ಕೇರಳದ ಬೇಪೂರ್ ಹಡಗು ಬೆಂಕಿಗೆ ತುತ್ತಾಗಿದ್ದು, ಈ ವೇಳೆ ಹಡಗಿನಲ್ಲಿದ್ದ 18 ಮಂದಿಯನ್ನು ರಕ್ಷಿಸಲಾಗಿದೆ. ಅವರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ನಾಲ್ವರಿಗೆ ಭಾಗಶಃ ಗಾಯಗಳಾಗಿದೆ. ಸದ್ಯ ಗಾಯಗೊಂಡ 6 ಮಂದಿಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದ ಬೇಪೂರ್ ಕಡಲ ಕಿನಾರೆಯಿಂದ 78 ನಾಟಿಕಲ್ ಮೈಲ್ ದೂರದಲ್ಲಿ ಹಡಗಿಗೆ ಬೆಂಕಿ ಆವರಿಸಿದೆ. 22 ಮಂದಿ ಸಿಬ್ಬಂದಿಯಿದ್ದ ಹಡಗಿನಲ್ಲಿ 18 ಮಂದಿಯನ್ನು ರಕ್ಷಣೆ ಮಾಡಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ. ಕಣ್ಮರೆಯಾದ ಸಿಬ್ಬಂದಿಗಾಗಿ ಕೋಸ್ಟ್ ಗಾರ್ಡ್ ಶೋಧಕಾರ್ಯ ಮುಂದುವರಿಸಿದ್ದಾರೆ.
ತೈವಾನ್‌ನ ಸೆಕೆಂಡ್ ಇಂಜಿನಿಯರ್ ಯು ಬೊ ಫಾಂಗ್, ಮ್ಯಾನ್ಮರ್‌ನ ಕಾರ್ಪೆಂಟರ್ ಸಾನ್ ವಿನ್, ಇಂಡೋನೇಷ್ಯಾದ ಎ.ಬಿ.ಜಾನಲ್ ಅಹಿದಿನ್, ತೈವಾನ್‌ನ ಮೋಟರ್ ಮ್ಯಾನ್ ಸಿಹ್ ಚಾಯ್ ವೆನ್ ಕಣ್ಮರೆಯಾಗಿದ್ದಾರೆ.
ಇನ್ನು ಚೀನಾ ಮೂಲದ ನಂ 1 ಆಯ್ಲಿರ್ ಲೂಯನ್ಲಿ ಮತ್ತು ಇಂಡೋನೇಷ್ಯಾದ ಫಿಟ್ಟರ್ ಸೋನಿಟೂರ್ ಹೆನಿ ಗಂಭೀರ ಗಾಯಗೊಂಡಿದ್ದಾರೆ. ಚೈನಾದ ಸೆಕೆಂಡ್ ಫಿಟ್ಟರ್‌ಗಳಾದ ಕ್ಸೂ ಪಬೋ, ಗೋ ಲಿನಿಂಗ್, ಮ್ಯಾನ್ಮರ್‌ನ ಎಬಿಗಳಾದ ಥೆನ್ ಥಾನ್ ತ್ವಾಯ್, ಕಿ ಜಾವ್ ತ್ವೂ ಅವರು ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜತೆಗೆ ಉಳಿದ 12 ಜನ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ.
ಇನ್ನು ಶ್ರೀಲಂಕಾದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರ ಮೂಲದ ಈ ಹಡಗಿನಲ್ಲಿ ಪೈಂಟ್, ಗನ್ ಪೌಡರ್ ಸೇರಿದಂತೆ ಹಲವು ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, 18 ಮಂದಿಯನ್ನು ರಕ್ಷಣೆ ಮಾಡಿದ್ದು, ಯಾವುದೇ ಅಪಾಯವಿಲ್ಲದೆ ಪಾರಾಗಿರುವ 12 ಮಂದಿಯನ್ನು ನಗರದ ಹೋಟೆಲ್‌ನಲ್ಲಿ ಇರಿಸಲಾಗಿದೆ.
ಇದಕ್ಕೂ ಮುನ್ನ ಈ ಎಲ್ಲ 18 ಮಂದಿಯನ್ನು ಐಎನ್‌ಎಸ್ ಸೂರತ್ ಮೂಲಕ ಆಳಸಮುದ್ರದಿಂದ ಮಂಗಳೂರಿನ ನವಬಂದರಿಗೆ ಕರೆತರಲಾಗಿದೆ. ಬಂದರಿನಿಂದ ಎಜೆ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಕಳುಹಿಸಲಾಯಿತು.

ಎಜೆ ಆಸ್ಪತ್ರೆಯ ವೈದ್ಯ ದಿನೇಶ್ ಕಂದಮ್ ಗಾಯಾಳುಗಳ ಸ್ಥಿತಿ ಬಗ್ಗೆ ಮಾತನಾಡಿ, ಈಗಾಗಲೇ ಆರು ಜನರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಆ ಆರು ಜನರ ಪೈಕಿ ಮೂವರು ಚೀನಾ ದೇಶದವರು, ಇಬ್ಬರು ಬರ್ಮಾ ಹಾಗೂ ಒಬ್ಬರು ಇಂಡೋನೆಶೀಯದವರು.
ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಶೇ.30 ರಿಂದ ಶೇ.40ರಷ್ಟು ದೇಹದ ಭಾಗಗಳು ಸುಟ್ಟಿವೆ. ಜತೆಗೆ ಶ್ವಾಸಕೋಶದಲ್ಲೂ ಸುಟ್ಟಗಾಯಗಳಾಗಿದೆ. ಉಳಿದ ನಾಲ್ಕು ಜನರಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ. ಗಂಭೀರ ಗಾಯಗೊಂಡ ಇಬ್ಬರಿಗೂ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
Related









