KSRTC: ಹೈಕೋರ್ಟ್ ಆದೇಶವನ್ನೇ ಉಲ್ಲಂಘಿಸಿ ಗುಜರಿ, ತಾಂತ್ರಿಕ ದೋಷವಿರುವ ಬಸ್‌ಗಳ ರಸ್ತೆಗಿಳಿಸಿ ಜೀವದ ಜತೆ ಚೆಲ್ಲಾಟ


ಕನಕಪುರ: ಗುಜರಿ ಬಸ್, ತಾಂತ್ರಿಕ ದೋಷವಿರುವ ಬಸ್‌ಗಳನ್ನು ರಸ್ತೆಗಿಳಿಸಬಾರದೆಂದು ಹೈಕೋರ್ಟ್ ತಾಕೀತು ಮಾಡಿದ್ದರೂ ಸಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಎಲ್ಲ ವಿಭಾಗಗಳ ಅಧಿಕಾರಿಗಳು ನಿಯಮ ಉಲ್ಲಂಘಿಸಿ ರಸ್ತೆಗಿಳಿಸಿ ಪ್ರಯಾಣಿಕರು ಸೇರಿದಂತೆ ಚಾಲನಾ ಸಿಬ್ಬಂದಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಅದಕ್ಕೆ ತಾಜಾ ನಿದರ್ಶನ ಎಂಬಂತೆ ನಿನ್ನೆ ಅಂದರೆ ಜೂ.19-ಕನಕಪುರ ಘಟಕದಿಂದ ತಮಿಳುನಾಡಿನ ಗಡಿಭಾಗವಾದ ಕೋಟೆಗೆ ಹೋಗುತ್ತಿದ್ದ ಬಸ್ ಮಾರ್ಗಮಧ್ಯೆ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ಕೊಳೆದುಕೊಂಡಿದೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸುತ್ತಿದ್ದ ಭಾರಿ ಅನಾಹುತ ತಪ್ಪಿದೆ.
ನಿನ್ನೆ ಬೆಳಗ್ಗೆ 7.45ರಲ್ಲಿ ಕನಕಪುರ ಘಟಕದಿಂದ ಹೊರಟ ಬಸ್ ಪ್ರಯಾಣಿಕರನ್ನು ಕರೆದುಕೊಂಡು ತಮಿಳುನಾಡಿಗೆ ಹೋಗುತ್ತಿತ್ತು. ಬೆಳಗ್ಗೆ ಸುಮಾರು 9 ಗಂಟೆಯಲ್ಲಿ ಈ ಬಸ್ ತಗ್ಗಟ್ಟಿ ಗ್ರಾಮದ ಬಳಿ ಬ್ರೇಕ್ಫೇಲ್‌ಆಗಿ ನಿಯಂತ್ರಣ ಕಳೆದುಕೊಂಡಿದೆ. ತಕ್ಷಣ ಚಾಲಕ ಬಸ್ಸನ್ನು ರಸ್ತೆ ಬದಿಯ ಮಣ್ಣಿನ ಗುಡ್ಡೆಗೆ ಗುದ್ದಿಸಿ ನಿಲ್ಲುವಂತೆ ಮಾಡಿದ್ದಾರೆ. ಇಲ್ಲದಿದ್ದರೆ ಎಷ್ಟು ಪ್ರಯಾಣಿಕರ ಪ್ರಾಣಪಕ್ಷೆ ಹಾರಿಹೋಗುತ್ತಿತ್ತೋ ಗೊತ್ತಿಲ್ಲ. ಆದರೆ ನೆನಪಿಸಿಕೊಂಡರೆ ಮೈಬೆವರುತ್ತದೆ.
ಈ ವಿಷಯ ತಿಳಿಯುತ್ತಿದ್ದಂತೆ ಕನಕಪುರದ ಕೆಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿಭಾಗಗಳಿಗೆ ಹೋಗಲು ಗುಜರಿ ಬಸ್‌ಗಳನ್ನು ಬಿಡುತ್ತಾರೆ. ಈ ಕೂಡಲೇ ಪ್ರಯಾಣಕ್ಕೆ ಯೋಗ್ಯವಿಲ್ಲದ ಬಸ್‌ನ್ನು ನಿಲ್ಲಿಸಬೇಕು. ಜನರ ಪ್ರಾಣ ಹೋದರೆ ಯಾರು ಹೊಣೆ ಎಂದು ಕಿಡಿಕಾರಿದ್ದಾರೆ.
ಗುಜರಿ ಬಸ್, ತಾಂತ್ರಿಕ ದೋಷವಿರುವ ಬಸ್‌ನ್ನು ರಸ್ತೆಗಿಳಿಸಬಾರದೆಂದು ಹೈಕೋರ್ಟ್ ತಾಕೀತು ಮಾಡಿದ್ದರೂ ಸಹ ನಿಯಮ ಉಲ್ಲಂಘಿಸಿ ರಸ್ತೆಗಿಳಿಸುತ್ತಿರುವುದಕ್ಕೆ ಎಂದು ಪ್ರಶ್ನಿಸಿದ್ದಾರೆ.
ಕನಕಪುರ ಘಟಕ ವ್ಯವಸ್ಥಾಪಕ ನರಸಿಂಹ ಅವರು ನಾವು ಗುಜರಿ ಬಸ್‌ಗಳನ್ನು ಓಡಿಸುತ್ತಿಲ್ಲ. ಬಸ್‌ಗಳನ್ನು ರಸ್ತೆಗಿಳಿಸುವ ಮುನ್ನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಿದ್ದರೆ ಈ ಬಸ್ ಏಕೆ ಈ ರೀತಿಯಾಗಿದೆ ಎಂಬುದಕ್ಕೆ ಅವರಲ್ಲಿ ಸಮಂಜಸವಾದ ಉತ್ತರ ಇಲ್ಲ.

ಕೆಲವೊಂದು ಬಾರಿ ಆಕಸ್ಮಿಕವಾಗಿ, ಏಕಾಏಕಿ ಬಸ್‌ಗಳಲ್ಲಿ ತಾಂತ್ರಿಕ ದೋಷದಿಂದ ಬ್ರೇಕ್ ಫೇಲೂರು ಆಗುವ ಸಾಧ್ಯತೆಗಳಿರುತ್ತವೆ. ಮುಂದೆ ಈ ರೀತಿ ಆಗದಂತೆ ಕ್ರಮವಹಿಸುತ್ತೇವೆ ಎಂದಷ್ಟೇ ಹೇಳಿಕೆ ನೀಡಿ ಜಾರಿಕೊಂಡಿದ್ದಾರೆ.
Related
