ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ವೈರಸ್ (ಕೋವಿಡ್-19) ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದು, ಎಲ್ಲಾ ದೇವಾಲಯಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಿದೆ. ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ‘ಸಿ’ ವರ್ಗದ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿಗೆ ಆಹಾರ ಕಿಟ್ ವಿತರಣೆಗೆ ಚಿತ್ರದುರ್ಗ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ನಿರ್ದೇಶನದಂತೆ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ “ಎ” ವರ್ಗದ ದೇವಾಲಯಗಳ ವತಿಯಿಂದ ಜಿಲ್ಲೆಯಲ್ಲಿನ “ಸಿ” ವರ್ಗದ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ಇತರೆ ಸಿಬ್ಬಂದಿಗಳಿಗಾಗಿ ಆಹಾರದ ಕಿಟ್ಗಳನ್ನು ಪೂರೈಸಲು ಸಂಬಂಧಪಟ್ಟ ತಾಲೂಕು ಆಡಳಿತಕ್ಕೆ ಗುರುವಾರ ಒಪ್ಪಿಸಲಾಯಿತು.
ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 299 “ಸಿ” ವರ್ಗದ ಮುಜರಾಯಿ ದೇವಸ್ಥಾನಗಳಿದ್ದು, ಈ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಇತರೆ ಸಿಬ್ಬಂದಿಗಳಿಗಾಗಿ “ಎ” ವರ್ಗದ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ, ಹಿರಿಯೂರು ತಾಲ್ಲೂಕು ವದ್ದೀಕೆರೆಯ ಕಾಲಭೈರವೇಶ್ವರಸ್ವಾಮಿ ದೇವಸ್ಥಾನ ಹಾಗೂ ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರ ಗ್ರಾಮದ ಗವಿರಂಗನಾಥಸ್ವಾಮಿ ದೇವಸ್ಥಾನದ ವತಿಯಿಂದ ಚಿತ್ರದುರ್ಗ ತಾಲ್ಲೂಕಿಗೆ-115, ಚಳ್ಳಕೆರೆ-40, ಹಿರಿಯೂರು-51, ಮೊಳಕಾಲ್ಮೂರು-29, ಹೊಳಲ್ಕೆರೆ-52 ಹಾಗೂ ಹೊಸದುಗ ತಾಲ್ಲೂಕಿಗೆ-142 ಸೇರಿದಂತೆ ಪಡಿತರವಿರುವ ಒಟ್ಟು 429 ಆಹಾರದ ಕಿಟ್ಗಳನ್ನು ವಿತರಿಸಲಾಗಿದೆ.
ಅರ್ಚಕರಿಗೆ ಹಾಗೂ ಇತರೆ ಸಿಬ್ಬಂದಿಗೆ ನೀಡಲು ಉದ್ದೇಶಿಸಲಾಗಿರುವ ಪ್ರತಿ ಆಹಾರ ಕಿಟ್ 5 ಕೆ.ಜಿ. ಅಕ್ಕಿ, 02 ಕೆ.ಜಿ. ತೊಗರಿ ಬೆಳೆ, 01 ಕೆ.ಜಿ. ಬೆಲ್ಲ, 01 ಲೀ. ಅಡುಗೆ ಎಣ್ಣೆ, 01 ಕೆ.ಜಿ. ಸಕ್ಕರೆ ಹಾಗೂ 01 ಕೆ.ಜಿ. ಉಪ್ಪು ಒಳಗೊಂಡಿದೆ.
ಮುಜರಾಯಿ ವ್ಯಾಪ್ತಿಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ಇತರೆ ಸಿಬ್ಬಂದಿಗಳಿಗೆ “ಎ” ವರ್ಗದ ದೇವಸ್ಥಾನಗಳ ವತಿಯಿಂದ ಆಹಾರದ ಕಿಟ್ಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಗುರುವಾರ ಆಯಾ ತಾಲ್ಲೂಕಿನ ತಹಶೀಲ್ದಾರ್ಗಳ ಮೂಲಕ ತಾಲ್ಲೂಕು ಆಡಳಿತಕ್ಕೆ ಆಹಾರದ ಕಿಟ್ಗಳನ್ನು ಒಪ್ಪಿಸಲಾಗಿದೆ. ಶುಕ್ರವಾರದಿಂದ ಸಂಬಂಧಪಟ್ಟ ದೇವಸ್ಥಾನಗಳ ಅರ್ಚಕರಿಗೆ ಹಾಗೂ ಇತರೆ ಸಿಬ್ಬಂದಿಗೆ ಆಹಾರದ ಕಿಟ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ತಹಸೀಲ್ದಾರ್ ತಿಳಿಸಿದ್ದಾರೆ.