ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ನೀಡಬೇಕು ಎಂದು ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಿ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದ ಬಳಿಕ ಸಂಪುಟಕ್ಕೆ ಮರು ಸೇರ್ಪಡೆ ಆಗಲಿ ಎಂದರು.
ಈ ಹಿಂದೆ ಸಹ ಆರೋಪಗಳು ಕೇಳಿ ಬಂದಾಗ ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಿದ ಉದಾಹರಣೆಗಳು ಇವೆ. ಅದೇ ರೀತಿ ಸಚಿವ ಜಮೀರ್ ಅಹಮದ್ ಖಾನ್ ಸಹ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಹೇಳಿದರು.
ನಿಮ್ಮ ರಾಜೀನಾಮೆ ಬೇಡ ಸಿಎಂ ರಾಜೀನಾಮೆ ಕೊಡಿಸಿ ಈರಣ್ಣ ಕಡಾಡಿ: ಇನ್ನು ಇತ್ತ ಶಾಸಕ ರಾಜು ಕಾಗೆ ಕ್ಷೇತ್ರದ ಕೆಲಸಗಳಾಗದೆ ಇರುವುದರಿಂದ ರಾಜೀನಾಮೆ ನೀಡಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ನೀವು ರಾಜೀನಾಮೆ ಕೊಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಿಮ್ಮ ಮುಖ್ಯಮಂತ್ರಿಗಳಿಂದ ರಾಜೀನಾಮೆ ಕೊಡಿಸಿ, ಜನರ ಬಳಿಗೆ ಹೋಗೋಣ ಏನು ತೀರ್ಮಾನ ಆಗುತ್ತೋ ನೋಡೋಣ ಎಂಬ ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಯಾರೂ ಬಂದರೂ ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕರೆದು ಮಾತನಾಡುವೆ: ಸರ್ಕಾರದ ಆಡಳಿತ ವೈಖರಿ ವಿರುದ್ಧ ಅಸಮಾಧಾನ ಹೊರಹಾಕಿ ರಾಜೀನಾಮೆ ನೀಡುವುದಾಗಿ ಹೇಳಿರುವ ಶಾಸಕ ರಾಜುಕಾಗೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರಾಯಚೂರಿನಲ್ಲಿಂದು ಶಾಸಕ ರಾಜುಕಾಗೆ ಅವರ ಕ್ಷೇತ್ರದ ಅನುದಾನದ ವಿಚಾರವಾಗಿ ಅಸಮಾಧಾನಗೊಂಡು ಬಹಿರಂಗವಾಗಿ ಹೇಳಿಕೆ ನೀಡಿರುವ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡುತ್ತೇನೆ. ಶಾಸಕ ಬೇಳೂರು ಗೋಪಾಲಕೃಷ್ಣ ರಾಜೀನಾಮೆಗೆ ಆಗ್ರಹಿಸಿರುವ ಬಗ್ಗೆ ಮಾಹಿತಿ ಇಲ್ಲ. ಯಾವ ಸನ್ನಿವೇಶದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಅಕ್ರಮ ಗಣಿಗಾರಿಕೆ ಬಗ್ಗೆ ಸಚಿವ ಎಚ್.ಕೆ ಪಾಟೀಲ್ ಪತ್ರ ಬರೆದಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಅಕ್ರಮ ಗಣಿಗಾರಿಕೆ ನಮ್ಮ ಕಾಲದಲ್ಲಿ ನಡೆದಿಲ್ಲ, ವಿಶೇಷ ನ್ಯಾಯಾಲಯ ಮಾಡಿ ತ್ವರಿತ ಗತಿಯಲ್ಲಿ ಇತ್ಯರ್ಥ ಮಾಡಿ ಎಂದು ಹೇಳಿದ್ದಾರೆ ಎಂದರು.
ಒಟ್ಟಾರೆ ಶಾಸಕ ಬಿ.ಆರ್. ಪಾಟೀಲ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಹೀಗೆ ಮುಂದುವರಿದರೆ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ.
Related
