ನಿವೃತ್ತಿಗೆ ಮುನ್ನವೇ ನೌಕರರ ವಿಚಾರಣೆ ಮುಗಿದಿರಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮದ ಖಡಕ್ ಎಚ್ಚರಿಕೆ


ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ವೃತ್ತಿಯಲ್ಲಿರುವ ಸಂದರ್ಭದಲ್ಲಿ ದುರ್ನಡತೆ, ಕರ್ತವ್ಯಲೋಪದಂತಹ ಆರೋಪಗಳನ್ನು ಎದುರಿಸುವ ಸರ್ಕಾರಿ ನೌಕರರು, ಅವರು ನಿವೃತ್ತರಾಗುವ ಮುನ್ನವೇ ಅವರ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.
ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಅವರು ಸೇವೆಯಲ್ಲಿರುವಾಗ ಎಸಗಿದ ದುರ್ನಡತೆಗಾಗಿ ಕ್ಷುಪ್ತ ಸಮಯದಲ್ಲಿ ಅಂದರೆ ಅಂತಹ ನೌಕರ ಸೇವೆಯಿಂದ ನಿವೃತ್ತಿ ಹೊಂದುವ ಸಾಕಷ್ಟು ಪೂರ್ವದಲ್ಲಿಯೇ ಶಿಸ್ತಿನ ಕ್ರಮ ಆರಂಭಿಸಬೇಕು ಹಾಗೂ ಇತ್ಯರ್ಥಪಡಿಸಬೇಕು.
ಈ ಮೇಲೆ ಉಲ್ಲೇಖಿಸಿರುವ ಹಲವಾರು ಸುತ್ತೋಲೆ ಹಾಗೂ ಅಧಿಕೃತ ಜ್ಞಾಪನಗಳಲ್ಲಿ ಸರ್ಕಾರದಿಂದ ಕಾಲ ಕಾಲಕ್ಕೆ ಸೂಚನೆಗಳನ್ನು ನೀಡಲಾಗಿದೆ. ನಿವೃತ್ತಿಯಾಗುವ ಮುನ್ನವೇ ಇಲಾಖೆ ವಿಚಾರಣೆ ಪೂರ್ಣಗೊಳಿಸಿದ್ದಲ್ಲಿ ಮಾತ್ರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಆದರೆ, ಇಂತಹ ಕಾರ್ಯವಾಗುತ್ತಿಲ್ಲ. ಸರ್ಕಾರಿ ನೌಕರ ನಿವೃತ್ತನಾದಲ್ಲಿ ಆತನ ವಿರುದ್ಧ ಕ್ರಮ ಸಾಧ್ಯವಾಗುವುದಿಲ್ಲ.
ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ವಿಚಾರಣೆಗಳನ್ನು ಸರ್ಕಾರಕ್ಕೆ ಆತನಿಂದ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣದ ಮೇಲೆ ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರಕ್ಕೆ ಬರುತ್ತಿವೆ. ಇದು ಸರಿಯಲ್ಲ.
ಇದಲ್ಲದೇ ಸರ್ಕಾರಿ ನೌಕರ ನಿವೃತ್ತಿ ಹೊಂದುವ ಕೆಲವೇ ದಿನಗಳ ಮೊದಲು ಶಿಸ್ತು ಕ್ರಮದ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿರುವುದನ್ನು ಕೂಡ ಗಮನಿಸಲಾಗಿದೆ. ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಎಸಗಿದ ದುರ್ನಡತೆಗೆ ಸಂಬಂಧಿಸಿದಂತೆ ಆತ ನಿವೃತ್ತಿ ಹೊಂದುವವರೆಗೆ ಯಾವುದೇ ಕ್ರಮವಹಿಸದೆ ಅಥವಾ ನಿವೃತ್ತಿ ನಿಕಟಪೂರ್ವದಲ್ಲಿ ಅಂತಹ ಶಿಸ್ತಿನ ಕ್ರಮ ಆರಂಭಿಸುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ.
ಹೀಗಾಗಿ ನಿವೃತ್ತಿಗೆ ಮುನ್ನವೇ ದುರ್ನಡತೆ, ಕರ್ತವ್ಯಲೋಪದಂತಹ ಆರೋಪಗಳನ್ನು ಎದುರಿಸುವ ನೌಕರರ ವಿಚಾರಣೆ ಮುಗಿದಿರಬೇಕು ಒಂದು ವೇಳೆ ವಿಳಂಬ ಮಾಡಿದಲ್ಲಿ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿ ಆದೇಶ ಹೊರಡಿಸಿದೆ.

Related
