ಲೋಕಾಯುಕ್ತರು ರಾಜಿನಾಮೆ ನೀಡಬೇಕು, ಅಬಕಾರಿ ಸಚಿವರ ವಜಾಗೊಳಿಸಲು ಆಗ್ರಹಿಸಿ KRS ಪಕ್ಷದಿಂದ ಬೃಹತ್ ಪ್ರತಿಭಟನೆ

ಬೆಂಗಳೂರು: ಲೋಕಾಯುಕ್ತರು ರಾಜಿನಾಮೆ ನೀಡಲಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ವಜಾಗೊಳಿಸಿ, ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ಹಾಗೂ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿತ್ತು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಸಮಾವೇಶಗೊಂಡ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಆಡಳಿತದಲ್ಲಿನ ಅಕ್ರಮ, ಅವ್ಯವಹಾರ, ಕರ್ತವ್ಯಲೋಪ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದ ಲೋಕಾಯುಕ್ತ ಸಂಸ್ಥೆಯೆ ನಿರಂತರವಾಗಿ ಅಕ್ರಮಗಳಲ್ಲಿ ಮತ್ತು ಅವ್ಯವಹಾರಗಳಲ್ಲಿ ಸಿಲುಕುತ್ತಿರುವುದು ದುರದೃಷ್ಟಕರ. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯವಾಗುತ್ತಿವೆ ಮತ್ತು ಸ್ಪಷ್ಟವಾಗಿ ಭ್ರಷ್ಟಾಚಾರವೆಸಗಿರುವ ಪ್ರಕರಣಗಳು ಕೂಡ ವಿಲೇವಾರಿಯಾಗದೆ ಧೂಳು ಹಿಡಿಯುತ್ತಿವೆ. ಇದು ಲೋಕಾಯುಕ್ತ ಸಂಸ್ಥೆಯೆ ಹಳ್ಳ ಹಿಡಿದಿರುವುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಲೋಕಾಯುಕ್ತ ಸಂಸ್ಥೆಯ ಘನತೆ ಮತ್ತು ವಿಶ್ವಾಸವನ್ನು ಎತ್ತಿ ಹಿಡಿಯಬೇಕಾದ ಹೊಣೆಗಾರಿಕೆ ಹಾಲಿ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರ ಮೇಲಿದೆ. ಆದರೆ ಪ್ರಸ್ತುತ ಲೋಕಾಯುಕ್ತರು ಈ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿರುವುದು ಸ್ಪಷ್ಟವಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆಯುತ್ತಿದ್ದರೂ ಕೂಡ ಅದನ್ನು ನಿಯಂತ್ರಿಸುವಲ್ಲಿ ಅವರು ವಿಫಲರಾಗಿದ್ದಾರೆ.
ಹಾಗೆಯೆ, ಅವರ ಕುಟುಂಬದವರು ಅವರ ಸ್ಥಾನವನ್ನು ದುರ್ಬಳಕೆ ಮಾಡಿರುವ ಬಗ್ಗೆ ಗಂಭೀರ ಆರೋಪವಿದ್ದು, ಆ ಬಗೆಗಿನ ಪ್ರಕರಣವು ನ್ಯಾಯಾಲಯದಲ್ಲಿದೆ. ಇಂತಹವರು ಲೋಕಾಯುಕ್ತರ ಸ್ಥಾನದಲ್ಲಿ ಮುಂದುವರಿಯುವುದು ಉಚಿತವಲ್ಲ. ಈ ಬಗ್ಗೆ ನೈತಿಕ ಹೊಣೆಗಾರಿಕೆ ಹೊತ್ತು ಲೋಕಾಯುಕ್ತರು ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಆಗ್ರಹಿಸಿದರು.
ಕರ್ನಾಟಕ ಲೋಕಾಯುಕ್ತವು ದೇಶಕ್ಕೆ ಮಾದರಿಯಾದಂತಹ ಸಂಸ್ಥೆಯಾಗಿತ್ತು, ಆದರೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಅದಕ್ಷತೆ, ಅಕ್ರಮಗಳಿಗೆ ಕುಖ್ಯಾತಿ ಪಡೆದು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಲೋಕಾಯುಕ್ತ ಸಂಸ್ಥೆಯ ಅಕ್ರಮಗಳ ವಿರುದ್ದ ಮತ್ತು ಅದರ ಬಲವರ್ಧನೆಗಾಗಿ ಕೆ.ಆರ್.ಎಸ್. ಪಕ್ಷವು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಈ ವಿಚಾರಗಳ ಬಗ್ಗೆ ಧ್ವನಿ ಎತ್ತಬೇಕಾದ ವಿಪಕ್ಷಗಳು ಗಾಢ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಮತ್ತು ಬಲಿಷ್ಠ ಲೋಕಾಯುಕ್ತವು ಅವರಿಗೂ ಕೂಡ ಬೇಕಾಗಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ರಾಜ್ಯ ಉಪಾಧ್ಯಕ್ಷರಾದ ಜ್ಞಾನ ಸಿಂಧು ಸ್ವಾಮಿ ಆರೋಪ ಮಾಡಿದರು.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಲು ಸಾಲು ಹಗರಣಗಳು ನಡೆಯುತ್ತಿದ್ದು, ನಿಯಂತ್ರಿಸಲು ಸರ್ಕಾರದ ವತಿಯಿಂದ ಯಾವುದೇ ಕ್ರಮವಾಗುತ್ತಿಲ್ಲ. ಸಿದ್ದರಾಮಯ್ಯನವರ ಸರ್ಕಾರವು ಕೇವಲ ಗ್ಯಾರೆಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲದ ಕೊರತೆ ಕಾಡಲಿದ್ದು, ದಕ್ಷ ಆಡಳಿತ ಮತ್ತು ಭ್ರಷ್ಟಾಚಾರ ನಿಯಂತ್ರಣದ ಮೂಲಕ ಕಲ್ಯಾಣ ಯೋಜನೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಬಹುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಹೇಳುತ್ತಾ ಬಂದಿದೆ.
ಆದರೆ, ಈ ಬಗ್ಗೆ ಗಮನ ನೀಡದೆ, ಈಗ ಸ್ವಪಕ್ಷೀಯರಿಂದಲೆ ಭ್ರಷ್ಟಾಚಾರದ ಬಗ್ಗೆ ಹೇಳಿಕೆಗಳು ಬರುತ್ತವೆ. ಸರ್ಕಾರದ ಬಹುತೇಕ ಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದ ಶಾಸಕರು ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಮಾಡಿರುವುದೆ ಸಾಕ್ಷಿಯಾಗಿದೆ. ಇನ್ನು ಲೋಕಾಯುಕ್ತ ಪೊಲೀಸರ ವಸೂಲಿಬಾಜಿಗೆ ಪ್ರಮುಖವಾಗಿ ಅಬಕಾರಿ ಇಲಾಖೆಯ ಬಹುತೇಕ ಅಧಿಕಾರಿಗಳು ಗುರಿಯಾಗಿದ್ದಾರೆ. ಇಂದು ಅಬಕಾರಿ ಇಲಾಖೆಯಲ್ಲಿ ಅಸಹ್ಯಕರ ಅವ್ಯವಹಾರ, ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿರುವುದು ಸ್ಪಷ್ಟವಾಗಿದೆ.
ಇವನ್ನೆಲ್ಲ ನಿಯಂತ್ರಿಸಬೇಕಾದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಆರೋಪಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನುವುದು ಗಂಭೀರ ವಿಷಯವಾಗಿದೆ. ಆದ್ದರಿಂದ ಈ ಕೂಡಲೆ ತಿಮ್ಮಾಪುರ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು, ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರನ್ನು ತಮ್ಮ ಸಚಿವ ಸಂಪುಟದಿಂದ ವಜಾ ಮಾಡಬೇಕು. ಹಾಗೆಯೆ ಈ ಪ್ರಕರಣದ ತನಿಖೆಯಲ್ಲಿ ಹಲವು ಸಚಿವರು ಮತ್ತು ಅವರ ಆಪ್ತರು ಆರೋಪಿಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು, ಆ ಸಚಿವರುಗಳನ್ನು ಕೂಡ ತಮ್ಮ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ರಾಜ್ಯ ಉಪಾಧ್ಯಕ್ಷ ರಘು ಜಾಣಗೆರೆ ಆಗ್ರಹಿಸಿದರು.
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳನ್ನು ಲೋಕಾಯುಕ್ತ ಪೊಲೀಸರೇ ತನಿಖೆ ಮಾಡುತ್ತಿದ್ದಾರೆ, ಆದರೆ ರಾಜ್ಯ ಪೊಲೀಸ್ ಇಲಾಖೆ ಹಾಗೂ ಲೋಕಾಯುಕ್ತ ಪೊಲೀಸ್ ಸಿಬ್ಬಂದಿ ಒಂದೇ ಮೂಲದವರಾಗಿದ್ದು, ಇವೆರಡೂ ಸಂಸ್ಥೆಗಳಿಂದ ತನಿಖೆ ಮಾಡುವುದು ಸ್ವಹಿತಾಸಕ್ತಿಯ ಸಂಘರ್ಷವಾಗುತ್ತದೆ ಮತ್ತು ತನಿಖೆ ಪಾರದರ್ಶಕವಾಗಿ ನಡೆಯುವ ಸಂಭವ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಸರ್ಕಾರವು ಈ ಕೂಡಲೇ, ಈ ಪ್ರಕರಣವನ್ನು ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐಗೆ ವಹಿಸಬೇಕೆಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್ ಆಗ್ರಹಿಸಿದರು.
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳನ್ನು ಪೊಲೀಸರು ತಡೆದರು ಆಗ ಪ್ರತಿಭಟನಾಕಾರರು ಪೊಲೀಸರ ಕಾಲಿಗೆ ಬಿದ್ದು ವಿಧಾನಸೌಧ ನಮ್ಮದು ನಾವು ವಿಧಾನಸೌಧದಲ್ಲಿ ದಾಂದಲೆ ಮಾಡಲು ಹೊರಟಿಲ್ಲ ನಮ್ಮ ಆಗ್ರಹವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಬಿಡಿ ಎಂದು ಪೊಲೀಸರ ಬಳಿ ಕೇಳಿಕೊಂಡರು. ನಂತರ ಕೆಆರ್‌ಎಸ್ ಪಕ್ಷದ ಒಂದು ನಿಯೋಗವನ್ನು ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಯನ್ನು ಭೇಟಿ ಮಾಡಿಸಿ ಪಕ್ಷದ ಆಗ್ರಹ ಪತ್ರವನ್ನು ಸರ್ಕಾರಕ್ಕೆ ನೀಡಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಎಸ್, ಸೋಮಸುಂದರ್. ರಾಜ್ಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನಯ್ಯ ಬಿ.ಎಸ್, ವಿಜಯ್ ಕುಮಾರ್ ಯು.ಬಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ರಘು ನಂದನ, ಕೃಷ್ಣ ವಿ.ಬಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ವೀರೇಶ್, ಯುವ ಘಟಕದ ಅಧ್ಯಕ್ಷೆ ಜನನಿ ವತ್ಸಲ, ರೈತ ಘಟಕದ ಅಧ್ಯಕ್ಷರಾದ ಜೋಗ್ನಳ್ಳಿ ಗುರುಮೂರ್ತಿ, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷರಾದ ಪ ಯ ಗಣೇಶ್ ಹಾಗು ಸಾವಿರಾರು ಪಕ್ಷದ ಸೈನಿಕರು ಭಾಗವಹಿಸಿದ್ದರು.
Related

You Might Also Like
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...