ಕಲಬುರಗಿ: ಕೊರೊನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನಗಳನ್ವಯ ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಪ್ರದೇಶಗಳಿಗೆ ಮತ್ತೆ ಕೆಲವೊಂದು ವಾಣಿಜ್ಯ ಅಂಗಡಿ ಮತ್ತು ಮಳಿಗೆಗಳನ್ನು ತೆರೆಯಲು ಸಡಿಲಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಈ ವಾಣಿಜ್ಯ ಅಂಗಡಿ ಹಾಗೂ ಮಳಿಗೆಗಳಲ್ಲಿ ಜಿಲ್ಲೆಯಾದ್ಯಂತ ಕನಿಷ್ಠ ಸಿಬ್ಬಂದಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಹ್ಯಾಂಡ್ವಾಶ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸುವ ಷರತ್ತುಗೊಳಪಟ್ಟು ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಹೊಸದಾಗಿ ಅನುಮತಿ ನೀಡಿದ ಸೇವೆಗಳ ವಿವರ
ಬಟ್ಟೆ, ಭಾಂಡೆ, ಬಂಗಾರ, ಮೊಬೈಲ್ ಅಂಗಡಿ ರಿಚಾರ್ಜ್ ಸೆಂಟರ್, ಬೇಕರಿ, ಎಲೆಕ್ಟ್ರಾನಿಕ್ಸ್ ಶಾಪ್ ಮತ್ತು ಹೋಮ್ ಅಪ್ಲಾಯನ್ಸ್, ಬುಕ್ ಸ್ಟಾಲ್, ಸ್ಟೇಷನರಿ ಅಂಗಡಿ, ಹಾರ್ಡವೇರ್, ಪೇಂಟ್ ಅಂಗಡಿ, ಅಟೋಮೋಬೈಲ್ ಅಂಗಡಿ ಹಾಗೂ ಕಂಪ್ಯೂಟರ್ (ಸಾಫ್ಟವೇರ್ ಹಾಗೂ ಹಾರ್ಡ್ವೇರ್) ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಇದಲ್ಲದೇ ಎಲ್ಲ ತರಹದ ಹೊಟೇಲ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕನಿಷ್ಠ ಸಿಬ್ಬಂದಿಯೊಂದಿಗೆ ಪಾರ್ಸಲ್ ವ್ಯವಸ್ಥೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಲಭ್ಯವಿರದ ಸೇವೆಗಳು
ಮಾಲ್, ಮಲ್ಟಿಪ್ಲೆಕ್ಸ್, ಸಿನಿಮಾ ಚಿತ್ರಮಂದಿರ, ಲಾಡ್ಜ್ಗಳು ತೆರೆಯಲು ಅನುಮತಿ ಇರುವುದಿಲ್ಲ. ಮಂದಿರ, ಮಸೀದಿ, ಗುರುದ್ವಾರ ಹಾಗೂ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ. ಹೇರ್ ಕಟಿಂಗ್ ಸಲೂನ್ ಅಂಗಡಿಗಳು, ಮಸಾಜ್ ಸೆಂಟರ್ಸ್, ಈಜುಕೊಳಗಳು, ಜಿಮ್ಗಳನ್ನು ತೆರೆಯುವಂತಿಲ್ಲ. ಕಿರಾಣಾ ಅಂಗಡಿ, ಪಾನ್ ಅಂಗಡಿಗಳಲ್ಲಿ ಬೀಡಿ, ಸಿಗರೇಟ್, ಗುಟಕಾ, ಪಾನ್ ಬೀಡಾಗಳ ಮಾರಾಟ ಮಾಡುವಂತಿಲ್ಲ. ಸಾರ್ವಜನಿಕರು ಪಾನ್ ಬೀಡಾಗಳನ್ನು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ಸಹ ನಿಷೇಧಿಸಲಾಗಿದೆ. ಅನಾವಶ್ಯಕ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail