- ಬಾಲ್ಯ ವಿವಾಹ ಪ್ರಕರಣಗಳಶೂನ್ಯಕ್ಕೆ ತನ್ನಿ l ಅಧಿಕಾರಿಗಳೀಗೆ ಜಿಲ್ಲಾಧಿಕಾರಿ ಬಸವರಾಜು ತಾಕೀತು
ಬೆಂಗಳೂರು ಗ್ರಾಮಾಂತರ: ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಬಾಲ್ಯ ವಿವಾಹ ಪ್ರಕರಣಗಳನ್ನು ಶೂನ್ಯಕ್ಕೆ ತರುವಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ತಾಕೀತು ಮಾಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು, ಅಧಿಕಾರಿಗಳ ಸಮನ್ವಯತೆ ಹಾಗೂ ಸಹಕಾರದಿಂದ ಬಾಲ್ಯ ವಿವಾಹ ಪ್ರಕರಣಗಳನ್ನು ಶೇಕಡ ನೂರರಷ್ಟು ತಡೆಯಬಹುದು. ಬಾಲ್ಯ ವಿವಾಹದ ಬಗ್ಗೆ ದೂರು, ಮಾಹಿತಿ ಬಂದ ಕೂಡಲೇ ಎಂತಹ ಸಂದರ್ಭ ಇದ್ದರು ಕೂಡ ಅಧಿಕಾರಿಗಳು ಹೋಗಿ ತಡೆಯಬೇಕು. ಬಾಲ್ಯ ವಿವಾಹ ತಡೆಯುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನುಷ್ಠಾನದ ಭಾಗವಾಗಿರುವ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಶಾಲಾ ಕಾಲೇಜು, ಕೈಗಾರಿಕೆ, ಕಾರ್ಖಾನೆಗಳಲ್ಲಿ ಆಗಿಂದಾಗ್ಗೆ ಪರಿಶೀಲನೆ ನಡೆಸಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 10 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, 07 ಪ್ರಕರಣ ತಡೆಯಲಾಗಿದೆ. 02 ಬಾಲ್ಯ ವಿವಾಹ ನಡೆದಿದ್ದು, ಎರಡು ಎಫ್ಐಆರ್ ದಾಖಲಿಸಲಾಗಿದೆ.
ಸಾರ್ವಜನಿಕರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ-1098, ಪೊಲೀಸ್ ಸಹಾಯವಾಣಿ 112 ಕರೆ ಮಾಡಿ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆ ಅವರ ಗಮನಕ್ಕೆ ತುರ್ತಾಗಿ ತರಬಹುದಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಇನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಪೋಷಣ್ ಅಭಿಯಾನದಡಿ ಪೌಷ್ಠಿಕ ಆಹಾರ ನೀಡಿ, ಅವರನ್ನು ಸದೃಢರನ್ನಾಗಿಸಬೇಕು. ಎಂದರಲ್ಲದೆ ಐ.ಸಿ.ಡಿ.ಎಸ್ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಪೋಷಣ್ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯನ್ನು ಅಪೌಷ್ಟಿಕ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.
ಕೌಟುಂಬಿಕ ಹಿಂಸೆಗೊಳಗಾದ ಮಹಿಳೆಯರಿಗೆ ಸಕಾಲದಲ್ಲಿ ಆಪ್ತ ಸಮಾಲೋಚನೆ ನಡೆಸಿ ಆತ್ಮಸ್ಥೈರ್ಯ ತುಂಬಬೇಕು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ದೌರ್ಜನ್ಯಗೊಳಗಾದ ಮಹಿಳೆಯರಿಗೆ, ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನ್ಯಾಯ ಒದಗಿಸಿ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮುದ್ದಣ್ಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನೀತಾಲಕ್ಷ್ಮೀ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ, ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
Related
