NEWSಕೃಷಿನಮ್ಮಜಿಲ್ಲೆ

ರೈತರಿಗೆ ಬೆಳೆ ವಿಮೆ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಬಸವರಾಜು ತಾಕೀತು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಕೃಷಿ, ತೋಟಗಾರಿಕೆ ಅಧಿಕಾರಿಗಳು ಮತ್ತು ಬೆಳೆ ವಿಮಾ ಸಂಸ್ಥೆಗಳು ಜಂಟಿಯಾಗಿ ಸ್ಥಳೀಯ ಮಟ್ಟದಲ್ಲಿ ರೈತರಿಗೆ ಬೆಳೆ ವಿಮೆ ಬಗ್ಗೆ ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸುವ ಮೂಲಕ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಪ್ರೇರೆಪಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೆಳೆ ಸಮೀಕ್ಷೆ, ಎಣ್ಣೆಕಾಳು ಅಭಿಯಾನ ಯೋಜನೆಯ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ಹಾನಿಯಾದರೆ ಅಂತಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ಸಿಗಲಿದೆ. ಹಾಗಾಗಿ ಅಧಿಕಾರಿಗಳು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ಜಿಲ್ಲೆಯ ಎಲ್ಲಾ ರೈತರಿಗೆ ಜಾಗೃತಿ ಮೂಡಿಸಿ ಬೆಳೆ ವಿಮೆಗೆ ನೋಂದಾಯಿಸಲು ಪ್ರೇರೇಪಿಸಿ ಎಂದರು.

ಯಾವ ಬೆಳೆಗೆ ಎಷ್ಟು ವಿಮೆ ಸಿಗಲಿದೆ?: ರಾಗಿ (ಮಳೆಯಾಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 340 ರೂ. ಪಾವತಿಸಿದರೆ ವಿಮಾ ಮೊತ್ತ 17000 ರೂ. ಪಡೆಯಬಹುದು. ರಾಗಿ (ನೀರಾವರಿ ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 406 ರೂ. ಪಾವತಿಸಿದರೆ ವಿಮಾ ಮೊತ್ತ 20300 ರೂ. ಪಡೆಯಬಹುದು.

ಭತ್ತ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 746 ರೂ. ಪಾವತಿಸಿದರೆ ವಿಮಾ ಮೊತ್ತ 37300 ರೂ. ಪಡೆಯಬಹುದು. ಮುಸುಕಿನ ಜೋಳ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 452 ರೂ. ಪಾವತಿಸಿದರೆ ವಿಮಾ ಮೊತ್ತ 22600 ರೂ. ಪಡೆಯಬಹುದು.

ಮುಸುಕಿನ ಜೋಳ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 516 ರೂ. ಪಾವತಿಸಿದರೆ ವಿಮಾ ಮೊತ್ತ 25800 ರೂ. ಪಡೆಯಬಹುದು. ಹುರಳಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 164 ರೂ. ಪಾವತಿಸಿದರೆ ವಿಮಾ ಮೊತ್ತ 8200 ರೂ. ಪಡೆಯಬಹುದು.

ನೆಲಗಡಲೆ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 436 ರೂ. ವತಿಸಿದರೆ ವಿಮಾ ಮೊತ್ತ 21800 ರೂ. ಪಡೆಯಬಹುದು. ತೊಗರಿ (ಮಳೆಆಶ್ರಿತ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 384 ರೂ. ಪಾವತಿಸಿದರೆ ವಿಮಾ ಮೊತ್ತ 19200 ರೂ. ಪಡೆಯಬಹುದು.

ತೊಗರಿ (ನೀರಾವರಿ) ರೈತರು ಪ್ರೀಮಿಯಂ ಮೊತ್ತ ಎಕರೆಗೆ 402 ರೂ. ಪಾವತಿಸಿದರೆ ವಿಮಾ ಮೊತ್ತ 20100 ರೂ. ಪಡೆಯಬಹುದು. ಟಮೊಟೊ ಬೆಳೆಗೆ ರೈತರು ಪ್ರೀಮಿಯಂ ಮೊತ್ತ ಎಕರೆಗೆ 1132 ರೂ. ಪಾವತಿಸಿದರೆ ವಿಮಾ ಮೊತ್ತ 56600 ರೂ. ಪಡೆಯಬಹುದು.

ರೈತರಿಗೆ ಕೃಷಿ ಕಾರ್ಯಾಗಾರವನ್ನು ಆಯೋಜನೆ ಮಾಡಿ, ರೋಗ ಬಾಧೆಯಿಂದ ಬೆಳೆಯ ರಕ್ಷಣೆ, ಗೊಬ್ಬರ ಪೂರೈಕೆ, ಇಳುವರಿ ಹೆಚ್ಚಿಸುವ ಬೆಳೆಗಳ ಕುರಿತು ಜಾಗೃತಿ ಮೂಡಿಸಿ. ಸಿರಿಧಾನ್ಯ, ಎಣ್ಣೆ ಕಾಳುಗಳ ಬೆಳೆಗೆ ಹೆಚ್ಚಿನ ಪ್ರೊತ್ಸಾಹ ಕಲ್ಪಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.

ಬೆಳೆ ಸಮೀಕ್ಷೆ ನಿಖರವಾಗಿ ಆಗಬೇಕು: ಜಿಲ್ಲೆಯಲ್ಲಿ ಈ ಸಾಲಿನ ಬೆಳೆ ಸಮೀಕ್ಷೆ ಆರಂಭಗೊಳ್ಳುತ್ತಿದ್ದು ಸಮೀಕ್ಷೆಯು ಸರಿಯಾದ ಕ್ರಮದಲ್ಲಿ ಆಗಬೇಕಿದೆ. ಸಮೀಕ್ಷೆ ಮಾಡುವವರಿಗೆ ಸೂಕ್ತ ತರಬೇತಿ ನೀಡಬೇಕು. ಮೊಬೈಲ್ ಅಪ್ಲಿಕೇಶನ್ ನಲ್ಲಿ ಸಮೀಕ್ಷೆ ನಡೆಸಿ ನಿಖರ ಅಂಕಿ ಅಂಕಿಅಂಶಗಳ ಕ್ರೂಡಿಕರಣ ಮಾಡಿ. ಬೆಳೆ ಸಮೀಕ್ಷೆಯಿಂದ ಸೆರೆ ಹಿಡಿಯಲಾದ ದತ್ತಾಂಶವನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಂಬಲ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು ಕೃಷಿ ಮತ್ತು ತೋಟಗಾರಿಕೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಮುಂತಾದ ಸೌಲಭ್ಯ ಒದಗಿಸಲು ಸಹಕಾರಿಯಾಗಲಿದೆ. ಆದ್ದರಿಂದ ಬೆಳೆ ಸಮೀಕ್ಷೆ ನಿಖರವಾಗಿ ಇರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಬಿ.ಜಿ ಕಲಾವತಿ, ಉಪನಿರ್ದೇಶಕರಾದ ಗಾಯಿತ್ರಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಗುಣವಂತ ಜೆ, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಲಕ್ಷಣ, ಜಿಲ್ಲಾ ಮಟ್ಟದ ಅಧಿಕಾರಿಗಳು, ಬೆಳೆ ವಿಮೆ ಪ್ರತಿನಿಧಿಗಳು, ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!