NEWSದೇಶ-ವಿದೇಶನಮ್ಮರಾಜ್ಯ

2 ಪ್ರತ್ಯೇಕ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ಗೆ ಸಿಎಂ ನೇತೃತ್ವದ ನಿಯೋಗ ಮನವಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಬೆಂಗಳೂರು ಗ್ರಾಮಾಂತರ -ಕೋಲಾರ – ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ – ಧಾರವಾಡ- ಬೆಳಗಾವಿ-ವಿಜಯಪುರ ಜಿಲ್ಲೆಗಳಿಗೆ ಕೇಂದ್ರ ಸರಕಾರವು ಎರಡು ಪ್ರತ್ಯೇಕ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಬೇಕೆಂದು ಕೋರಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರದ ನಿಯೋಗವು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದೆ.

ಕೇಂದ್ರ ಸರಕಾರವು 2018ರಲ್ಲಿ ಉತ್ತರಪ್ರದೇಶ ಮತ್ತು ತಮಿಳುನಾಡಿಗೆ ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಿದೆ. ಆದರೆ, ದೇಶದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕವು ಶೇ.75ರಷ್ಟು ಪಾಲು ಹೊಂದಿದ್ದು, ಜಾಗತಿಕವಾಗಿ ಮೂರನೇ ಅತ್ಯುತ್ತಮ ಕಾರ್ಯಪರಿಸರ ಹೊಂದಿರುವ ಹೆಗ್ಗಳಿಕೆ ಸಂಪಾದಿಸಿದೆ. ಹೀಗಾಗಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಿಗೆ ಒಂದೊಂದು ಡಿಫೆನ್ಸ್‌ ಕಾರಿಡಾರ್‌ ಮಂಜೂರು ಮಾಡಿದರೆ, ಇದು ಮೇಕ್‌ ಇನ್‌ ಇಂಡಿಯಾ ಉಪಕ್ರಮಕ್ಕೂ ಬಲ ತುಂಬುತ್ತದೆ ಎಂಬುದನ್ನು ರಕ್ಷಣಾ ಸಚಿವರಿಗೆ ನಿಯೋಗವು ಮನದಟ್ಟು ಮಾಡಿಕೊಟ್ಟಿದೆ.

ಉತ್ತರ ಕರ್ನಾಟಕದ ಮೇಲ್ಕಂಡ ಮೂರು ಜಿಲ್ಲೆಗಳಲ್ಲಿ ರಕ್ಷಣಾ ವಲಯದ ಉತ್ಪಾದನಾ ಕಂಪನಿಗಳಾದ ಬಾಲೂ ಫೋರ್ಜ್‌, ಏಕಸ್‌, ಬಿಕಾರ್‌ ಏರೋಸ್ಪೇಸ್‌, ವಾಲ್‌ಚಂದ್‌ ನಗರ್‌ ಇಂಡಸ್ಟ್ರೀಸ್‌ ಮುಂತಾದವು ನೆಲೆಯೂರಿವೆ. ಜತೆಗೆ ಬೆಳಗಾವಿಯಲ್ಲಿ 250 ಎಕರೆಯಲ್ಲಿ ದೇಶದ ಪ್ರಪ್ರಥಮ ಪ್ರಿಸಿಶನ್‌ ಉತ್ಪಾದನೆಯ ವಿಶೇಷ ಆರ್ಥಿಕ ವಲಯವು ಸಕ್ರಿಯವಾಗಿದೆ. ಇಲ್ಲಿ 31 ಘಟಕಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ಈ ಸಂದರ್ಭದಲ್ಲಿ ಅವರ ಗಮನಕ್ಕೆ ತರಲಾಗಿದೆ.

ದಕ್ಷಿಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರಕ್ಷಣಾ ಸಾಮಗ್ರಿ ಮತ್ತು ವೈಮಾಂತರಿಕ್ಷ ಕಂಪನಿಗಳಾದ ಸಾರ್ವಜನಿಕ ವಲಯದ ಎಚ್‌ಎಎಲ್‌, ಕಾಲಿನ್ಸ್‌ ಏರೋಸ್ಪೇಸ್‌, ಡೈನಮ್ಯಾಟಿಕ್‌ ಟೆಕ್ನಾಲಜೀಸ್‌, ಸೆಂಟಮ್, ಸಾಸ್ಮೋಸ್‌, ಬೆಲ್ಲಾಟ್ರಿಕ್ಸ್‌ ಮುಂತಾದವು ಇವೆ. ಇವುಗಳೊಂದಿಗೆ ಟಿಎಎಸ್‌ಎಲ್‌ ತನ್ನ ಅಂತಿಮ ಜೋಡಣಾ ಘಟಕವನ್ನು ಆರಂಭಿಸುತ್ತಿದೆ. ಏರ್‌ ಇಂಡಿಯಾ ಮತ್ತು ಇಂಡಿಗೋ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತಮ್ಮ ಎಂಆರ್‌ಒ ಘಟಕಗಳನ್ನು ಬೆಂಗಳೂರಿನ ಸಮೀಪದಲ್ಲಿ ಸ್ಥಾಪಿಸುತ್ತಿವೆ.

ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ವಿಸ್ತಾರದ ಹೈಟೆಕ್‌ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಇದೆ. ಈ ಭಾಗದಲ್ಲಿ ದೇಶದ ಏರ್‌ಕ್ರಾಫ್ಟ್‌ ಮತ್ತು ಸ್ಪೇಸ್‌ಕ್ರಾಫ್ಟ್‌ ವಲಯದ ಶೇಕಡ 25ರಷ್ಟು ತಯಾರಿಕೆ ನಡೆಯುತ್ತಿದೆ. ವಿಮಾನ ಮತ್ತು ಹೆಲಿಕಾಪ್ಟರ್‌ ತಯಾರಿಕೆಯಲ್ಲಿ ರಾಜ್ಯದ ಕೊಡುಗೆ ಶೇ.67ರಷ್ಟಿದೆ. ಇವೆಲ್ಲವನ್ನೂ ಪರಿಗಣಿಸಿ, ಎರಡು ಡಿಫೆನ್ಸ್‌ ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂದು ನಿಯೋಗವು ಒತ್ತಾಯಿಸಿದೆ.

ಈ ವೇಳೆ ಮನವಿ ಸ್ವೀಕರಿಸಿದ ರಾಜನಾಥ್‌ ಸಿಂಗ್‌ ಅವರು ನಿಯೋಗದೊಂದಿಗೆ ಸಹಕಾತ್ಮಕವಾಗಿ ಸ್ಪಂದಿಸಿದ್ದು, ಇವುಗಳನ್ನು ಸೂಕ್ತವಾಗಿ ಪರಿಶೀಲಿಸುವ ಭರವಸೆ ನೀಡಿದರು.

ನಿಯೋಗದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಇಂಧನ ಸಚಿವ ಕೆ ಜೆ ಜಾರ್ಜ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಇದ್ದರು.

Megha
the authorMegha

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ