NEWSಕೃಷಿನಮ್ಮಜಿಲ್ಲೆ

ಕಬ್ಬು ಬೆಳೆಗಾರ ರೈತರ ಸಮಸ್ಯೆ ಬಗೆಹರಿಸಿ: ಡಿಸಿಗೆ ಕಬ್ಬು ಬೆಳೆಗಾರರ ಸಂಘ ಮನವಿ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕಬ್ಬು ಬೆಳೆಗಾರ ರೈತರ ಸಮಸ್ಯೆ ಬಗೆ ಹರಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಒತ್ತಾಯ ಪತ್ರ ಸಲ್ಲಿಸಲಾಯಿತು.

ಇಂದು ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮುಖ್ಯಸ್ಥರ ಸಭೆ ವೇಳೆ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ಮೈಸೂರು ಜಿಲ್ಲಾ ಘಟಕದ ವತಿಯಿಂದ ರೈತರ ಹಲವಾರು ಸಮಸ್ಯೆಗಳ ಕುರಿತು ಒತ್ತಾಯ ಪತ್ರ ಸಲ್ಲಿಸಲಾಯಿತು.

ಪ್ರಸಕ್ತ 2025-2026ನೇ ಸಾಲಿಗೆ ಕಬ್ಬಿನ ಎಫ್ಆರ್ಪಿ ದರ ಟನ್‌ಗೆ ಕೇವಲ 150 ರೂ. ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದ್ದು ಪುನರ್ ಪರಿಶೀಲನೆ ಮಾಡಿ ಸಿಎಸಿಪಿ ವರದಿಯಂತೆ ಪ್ರತಿ ಟನ್ ಕಬ್ಬಿಗೆ ರೈತನ ಹೊಲದಲ್ಲಿನ ದರ 4500 ರೂ. ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಸಕ್ಕರೆ ಕಾರ್ಖಾನೆಗಳಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ಕೊಡಿಸಬೇಕು. ಕಳೆದ ವರ್ಷ ಸರ್ಕಾರ ಹೆಚ್ಚುವರಿಯಾಗಿ ಟನ್‌ಗೆ 150 ರೂ. ಬೆಲೆ ನಿಗದಿ ಪಡಿಸಿದ್ದು, ಕಾರ್ಖಾನೆಗಳು ಇನ್ನು ಕೊಟ್ಟಿಲ್ಲ ಅದಕ್ಕೆ ಬಡ್ಡಿ ಸೇರಿಸಿ ತಕ್ಷಣವೇ ಬಾಕಿ ಹಣ ಕೊಡಿಸಬೇಕು.

ಕಬ್ಬಿನ ಎಫ್ಆರ್ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಇಳುವರಿ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಟ ಶೇ.9 ಕ್ಕೆ ನಿಗದಿ ಆಗಬೇಕು. ಇನ್ನು ಬೆಂಕಿ ಬಿದ್ದು ಸುಟ್ಟ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇಕಡ 25 ರಷ್ಟು ಹಣ ಕಡಿತ ಮಾಡುತ್ತಿರುವುದನ್ನು ತಪ್ಪಿಸಬೇಕು. ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮುಂದೆ ಸರ್ಕಾರದಿಂದ ತೂಕದ ಯಂತ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಕಬಿನಿ – ಕಾವೇರಿ ಅಚ್ಚು ಕಟ್ಟು ಭಾಗದ ನಾಳೆಗಳ ಮೂಲಕ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು, ಅಲ್ಲದೆ ಕೃಷಿ ಚಟುವಟಿಕೆ ನಡೆಸಲು ಸಕಾಲಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ರೈತರ ಜೀವ ನಾಡಿಯಾದ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ರೆಸಾರ್ಟ್ಗಳನ್ನು ತೆರವುಗೊಳಿಸಬೇಕು ಹಾಗೂ ರೆಸಾರ್ಟ್ ನಿರ್ಮಾಣ ಮಾಡದಂತೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

Advertisement

ಇನ್ನು ರೈತರ ಸಭೆ ಕರೆದು ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಏನು ಪ್ರಯೋಜನ? ಹೀಗಾಗಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇಂದಿನ ಸಭೆಯಲ್ಲಿ ಕ್ರಮ ಕೈಗೊಂಡು ಕಬ್ಬು ಬೆಳೆಗಾರ ರೈತರ ರಕ್ಷಣೆ ಮಾಡುವಂತೆ ಒತ್ತಾಯಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್‌ ಸೇರಿದಂತೆ ಹಲವಾರು ರೈತ ಮುಖಂಡರು ಹಾಗೂ ರೈತರು ಇದ್ದರು.

ವಿಜಯಪಥ - vijayapatha
Megha
the authorMegha

Leave a Reply

error: Content is protected !!