CRIMENEWSಕ್ರೀಡೆ

RCB ವಿಜಯೋತ್ಸವ ವೇಳೆ ನಡೆದ ದುರಂತಕ್ಕೆ ಆರ್​​ಸಿಬಿ, ಕೆಎಸ್​​ಸಿಎ, ಪೊಲೀಸರೇ ನೇರ ಹೊಣೆ: ತನಿಖಾ ಆಯೋಗ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಆರ್.ಸಿ.ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಜನ ಮೃತಪಟ್ಟ ಸಂಬಂಧ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರನ್ನೊಳಗೊಂಡ ಏಕ ಸದಸ್ಯ ತನಿಖಾ ಆಯೋಗ ಸಲ್ಲಿಸಿದ ವರದಿಯಲ್ಲಿ ಆರ್​​ಸಿಬಿ, ಕೆಎಸ್​​ಸಿಎ ಹಾಗೂ ಪೊಲೀಸರು ನೇರ ಹೊಣೆಗಾರರಾಗಿದ್ದಾರೆ.

ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರು ಕಾಲ್ತುಳಿತದ ತನಿಖಾ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಸಲ್ಲಿಸಿದ್ದಾರೆ.

ಜೂನ್‌.4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಸಂದರ್ಭದಲ್ಲಿ 11 ಮಂದಿ ಅಭಿಮಾನಿಗಳು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ‌.ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗವನ್ನು ಜೂನ್ 5ರಂದು ರಚಿಸಿತ್ತು.

ವ್ಯಾಪಕ ಪೊಲೀಸ್ ನಿಯೋಜನೆ ಇರಲಿಲ್ಲ: ನ್ಯಾ.ಮೈಕೆಲ್ ಡಿ.ಕುನ್ಹಾ ಅವರ ಏಕ‌ಸದಸ್ಯ ತನಿಖಾ ಆಯೋಗ ಪ್ರಮುಖವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕೆಎಸ್​​ಸಿಎ, ಡಿಎನ್​ಎ, ಅರ್​​ಸಿಬಿ ಹಾಗೂ ಪೊಲೀಸರು ಹೊಣೆ ಎಂದು ಉಲ್ಲೇಖಿಸಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸುವುದು ಅಸಾಧ್ಯವೆಂದು ಗೊತ್ತಿದ್ದರೂ ಕಾರ್ಯಕ್ರಮ ನಡೆಸಲಾಗಿದೆ.

ಈ ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯತನದಿಂದ ಈ ದುರಂತ ಸಂಭವಿಸಿದೆ. ವಿಜಯೋತ್ಸವಕ್ಕೆ ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ವ್ಯಾಪಕ ಪೊಲೀಸ್ ನಿಯೋಜನೆ ಇರಲಿಲ್ಲ. ಲಕ್ಷಾಂತರ ಅಭಿಮಾನಿಗಳು ಆಗಮಿಸಲಿದ್ದಾರೆ ಎಂಬುದನ್ನು ಅಂದಾಜಿಸುವಲ್ಲಿ ಪೊಲೀಸರು, ಆರ್​​ಸಿಬಿ ಹಾಗೂ ಕೆಎಸ್​ಸಿಎ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.

ಆಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ: ಕ್ರೀಡಾಂಗಣದ ಒಳಗೆ ಇದ್ದದ್ದು 79 ಪೊಲೀಸರು ಮಾತ್ರ. ಹೊರಗೆ ಅಗತ್ಯ ಪ್ರಮಾಣದ ಪೊಲೀಸರು ಇರಲಿಲ್ಲ. ಆಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ. ಸಾಯಂಕಾಲ 3.25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ 5.30ರ ವರೆಗೆ ಪೊಲೀಸ್ ಕಮಿಷನರ್​​ಗೆ ಮಾಹಿತಿ ಇರಲಿಲ್ಲ. ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದು ಸಂಜೆ 4 ಗಂಟೆಗೆ ಎಂಬ ಕರ್ತವ್ಯ ಲೋಪಗಳ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ವ್ಯಾಪಕ ಬಂದೋಬಸ್ತ್ ಮಾಡಲು ಪೊಲೀಸರು ವಿಫಲ: ಪೂರ್ವ ಯೋಜನೆ, ಪೂರ್ವ ಮಾಹಿತಿ ನೀಡದೆ, ಆರ್​​ಸಿಬಿ ಎಕ್ಸ್ ಖಾತೆಯಲ್ಲಿ ವಿಜಯೋತ್ಸವದ ಬಗ್ಗೆ ಪೋಸ್ಟ್ ಮಾಡಿತ್ತು. ಇದನ್ನು ನೋಡಿ ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬಂದಿದ್ದರು.

ಪೊಲೀಸರ ಜತೆ ಸಮಾಲೋಚನೆ ನಡೆಸದೇ ಆರ್​ಸಿಬಿ ಹಾಗೂ ಕೆಎಸ್​ಸಿಎ ವಿಜಯೋತ್ಸವ ನಡೆಸಿತ್ತು. ಇತ್ತ ಪೊಲೀಸರೂ ವ್ಯಾಪಕ ಬಂದೋಬಸ್ತ್ ಮಾಡಲು ವಿಫಲರಾಗಿದ್ದಾರೆ. ಅಗತ್ಯ ಪೊಲೀಸರನ್ನು ನಿಯೋಜಿಸದೇ ಇರುವ ಕಾರಣ ಈ ದೊಡ್ಡ ದುರಂತ ಸಂಭವಿಸಿದೆ ಎಂದು ಆಯೋಗ ಉಲ್ಲೇಖಿಸಿದೆ.

ಸಮನ್ವಯತೆ ಇಲ್ಲದಿರುವುದು ದುರಂತಕ್ಕೆ ಕಾರಣ: ಆರ್​ಸಿಬಿ ಉಚಿತ ಪಾಸ್ ಪ್ರಕಟಣೆಯು ಅಪಾರ ಅಭಿಮಾನಿಗಳು ಜಮಾವಣೆಯಾಗಲು ಕಾರಣವಾಗಿದೆ. ಅಲ್ಲದೆ, ಆರ್​ಸಿಬಿ, ಕೆಎಸ್​​ಸಿಎ ಹಾಗೂ ಪೊಲೀಸರ ಮಧ್ಯೆ ಯಾವುದೇ ಸಮನ್ವಯತೆ ಇಲ್ಲದೇ ಇರುವುದು ದುರಂತಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜತೆಗೆ, ಜನಸಂದಣಿ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ಇಲ್ಲದಿರುವ ಬಗ್ಗೆನೂ ತನಿಖಾ ಆಯೋಗ ಒತ್ತಿ ಹೇಳಿದೆ.

ಚರ್ಚಿಸಿ ತೀರ್ಮಾನ: ಏಕ‌ಸದಸ್ಯ ತನಿಖಾ ಆಯೋಗದ ವರದಿ ಪಡೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆರ್.ಸಿ.ಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕು 11 ಜನ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಅವಘಡದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಏಕ ಸದಸ್ಯ ಆಯೋಗವು ಇಂದು (ಜು.11) ಎರಡು ಸಂಪುಟಗಳಲ್ಲಿ ವರದಿ ಸಲ್ಲಿಸಿದೆ.

ವರದಿಯಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದ ನಂತರ ಸಂಪುಟ ನಿರ್ಧಾರ ಮಾಡಲಿದೆ. ವರದಿ ಈಗಷ್ಟೇ ಸಲ್ಲಿಕೆಯಾಗಿರುವುದರಿಂದ ನಾನು ವರದಿಯನ್ನು ಪೂರ್ಣವಾಗಿ ಓದಿಲ್ಲ. ಜುಲೈ 17 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಈ ವರದಿ ಮಂಡಿಸಿ, ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಸು ತಿಳಿಸಿದ್ದಾರೆ.

ವಿಜಯಪಥ - vijayapatha
Megha
the authorMegha

Leave a Reply

error: Content is protected !!