ಬೆಂಗಳೂರು ಗ್ರಾಮಾಂತ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಹೊಸ ಮೈಲಿಗಲ್ಲು ಸ್ಥಾಪಿಸಿದ್ದು ಮಹಿಳಾ ಪ್ರಯಾಣಿಕರ ಸಂಖ್ಯೆ ಇಂದು 500 ಕೋಟಿ ಉಚಿತ ಟಿಕೆಟ್ ವಿತರಣೆ ತಲುಪಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳು ಹಾಗೂ ಡಿಪೋಗಳಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಲಾಭ ಪ್ರತಿಯೊಬ್ಬ ಫಲಾನುವಿಗೂ ದೊರಕಿಸುವ ನಿಟ್ಟಿನಲ್ಲಿ, ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ಸರ್ಕಾರದ ಜನಪರ ಯೋಜನೆಗಳ, ಅಭಿವೃದ್ಧಿ-ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ದೇವನಹಳ್ಳಿ ತಾಲೂಕು ಅಧ್ಯಕ್ಷ ಜಗನ್ನಾಥ್ ಹೇಳಿದರು.
ದೇವನಹಳ್ಳಿ ಟೌನ್ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜು.13 ರಿಂದ 16 ರವರೆಗೆ ಹಮ್ಮಿಕೊಂಡಿರುವ ಸರ್ಕಾರದ ಎರಡು ವರ್ಷದ ಸಾಧನೆ ಹಾಗೂ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಯೋಜನೆಗಳ ಸಮಗ್ರ ಮಾಹಿತಿ, ಫಲಾನುಭವಿಗಳ ಅನಿಸಿಕೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನೊಳಗೊಂಡ ಸಮಗ್ರ ಮಾಹಿತಿಯುಳ್ಳ ಫಲಕಗಳನ್ನು ಅಳವಡಿಸಲಾಗಿದ್ದು, ವಸ್ತು ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ ಎಂದರು.
ಇನ್ನು ದೇವನಹಳ್ಳಿ ಟೌನ್ ಬಸ್ ನಿಲ್ದಾಣದಲ್ಲಿ ಬಸ್ ಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಇವತ್ತು ನಾವೆಲ್ಲ ಒಳ್ಳೆಯ ದಿನಗಳನ್ನು ಕಾಣುತ್ತಿದ್ದೇವೆ, ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಗೃಹಜ್ಯೋತಿ, ಯುವನಿಧಿ ಈ ರೀತಿಯ ಯೋಜನೆಗಳನ್ನು ಹಿಂದಿನ ಯಾವ ಸರ್ಕಾರವು ಮಾಡಿರಲಿಲ್ಲ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.

2023ರ ಜೂನ್ 11 ರಂದು ಶಕ್ತಿ ಯೋಜನೆ ಜಾರಿಗೆ ಬಂತು. ಕಳೆದ 2 ವರ್ಷ ಒಂದು ತಿಂಗಳ ಅವಧಿಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ಸಂಸ್ಥೆಯ 4 ನಿಗಮಗಳ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಇದುವರೆಗೆ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಿದ ಉಚಿತ ಟಿಕೆಟ್‌ಗಳ ಸಂಖ್ಯೆ ಇಂದು 500 ಕೋಟಿ ತಲುಪಲಿದೆ ಎಂದು ಸಿಹಿ ಹಂಚಿ ಸಂಭ್ರಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಬಮುಲ್ ನಿರ್ದೇಶಕ ಎಸ್.ಪಿ ಮುನಿರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕೆ.ಸಿ ಮಂಜುನಾಥ, ಲಕ್ಷ್ಮೀ ನಾರಾಯಣಪ್ಪ, ಅನಂತಕುಮಾರಿ, ಮುಖಂಡರಾದ ಚಿನ್ನಪ್ಪ, ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲ್ಲಯ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ತಾ.ಪಂ ಇಒ ಶ್ರೀನಾಥ್ ಗೌಡ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀ ದೇವಿ ನಗರ ಸಾರಿಗೆ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.
Related
