NEWSನಮ್ಮಜಿಲ್ಲೆನಮ್ಮರಾಜ್ಯ

ಡಿ.31ರವರೆಗೆ ಸಾರಿಗೆ ನೌಕರರು ಮುಷ್ಕರ ಮಾಡದಂತೆ ಎಸ್ಮಾಜಾರಿ ಮಾಡಿದ ಸರ್ಕಾರ- ಎಸ್ಮಾ ಜಾರಿ ಮಾಡಿದರೆ ಮುಷ್ಕರಕ್ಕೆ ಅವಕಾಶವಿಲ್ಲವೇ? ತಜ್ಞರ ಹೇಳಿಕೆ ಏನು?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜುಲೈ 29ರಿಂದ ಹಾಗೂ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಾಗೂ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಆದರೆ ಇದೀಗ ಸಾರಿಗೆ ನೌಕರರಿಗೆ ಕೆಎಸ್ಆರ್​​ಟಿಸಿ ಶಾಕ್ ನೀಡಿದ್ದು, ಪ್ರತಿಭಟನೆ ನಡೆಸದಂತೆ ಕಾರ್ಮಿಕ ಇಲಾಖೆ ಎಸ್ಮಾ ಜಾರಿ ಮಾಡಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿವೆ. ಆದರೆ ಕೆಎಸ್ಆರ್​​ಟಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿ ಮಾಡಲಾಗಿದೆ.

ಹೌದು! ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013 ಅಡಿ ಜುಲೈ 1ರಿಂದ ಆರು ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗುವಂತ್ತಿಲ್ಲ. ಅಂದರೆ ಡಿಸೆಂಬರ್​ 31ರ ವರೆಗೆ ನಿಗಮದಲ್ಲಿ‌ ಮುಷ್ಕರ ನಿರ್ಬಂಧಿಸಿ ಕೆಎಸ್ಆರ್​ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಎಸ್ಮಾ ಎಂದರೇನು?: ಎಸ್ಮಾ ಅಂದರೆ ಅಗತ್ಯ ಸೇವೆ ನಿರ್ವಹಣೆ ಕಾಯ್ದೆ ಎಂದರ್ಥ (Essential Services Maintenance Act). ಸರ್ಕಾರಿ ನೌಕರರನ್ನು ನಿಯಂತ್ರಣ ಮಾಡುವ ಕಾಯ್ದೆ 1968 ರಿಂದ ಚಾಲ್ತಿಯಲ್ಲಿದೆ. 1994ರಲ್ಲಿ ಕರ್ನಾಟಕದಲ್ಲಿ ಎಸ್ಮಾ ಕುರಿತು ಕಾನೂನಿನ ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಕಾಯ್ದೆಯಲ್ಲಿ ಒಟ್ಟು 9 ಸೆಕ್ಷನ್​ಗಳಿವೆ.

ಸೆಕ್ಷನ್‌ 2ರ ಪ್ರಕಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಮೇಲೆ ಸರ್ಕಾರ ಎಸ್ಮಾ ಜಾರಿ ಮಾಡಬಹುದಾಗಿದೆ. ಸೆಕ್ಷನ್‌ 3ರ ಪ್ರಕಾರ ಸಂಸ್ಥೆಗಳು ಮುಷ್ಕರ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬಹುದು. ಒಮ್ಮೆ ಆದೇಶ ಹೊರಡಿಸಿದರೆ ಅದು 1 ವರ್ಷ ಕಾಲ ಊರ್ಜಿತದಲ್ಲಿ ಇರಲಿದ್ದು, ಈ ಸಂದರ್ಭದಲ್ಲಿ ಯಾವುದೇ ನೌಕರರು ಅಥವಾ ಸಂಘಟನೆ ಮುಷ್ಕರ ನಡೆಸಿದರೆ ಅದು ಕಾನೂನುಬಾಹಿರವಾಗುವುದು.

ಒಂದು ವೇಳೆ ನೌಕರರು ಅಥವಾ ಸಂಘಟನೆ ಕಾನೂನುಬಾಹಿರ ಮುಷ್ಕರ ನಡೆಸಿದರೆ 1 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸುವ ಅವಕಾಶವಿದೆ. ಅಷ್ಟೇ ಅಲ್ಲದೆ ಇಂತಹ ಕಾನೂನುಬಾಹಿರ ಮುಷ್ಕರಕ್ಕೆ ಪ್ರೇರಣೆ ಅಥವಾ ಪ್ರಚೋದನೆ ನೀಡುವುದು ಕೂಡ ಅಪರಾಧವಾಗಿದ್ದು, ಸೆಕ್ಷನ್‌ 5ರ ಪ್ರಕಾರ 1 ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಬಹುದಾಗಿದೆ.

ಆದರೆ, ಸಾರಿಗೆ ನೌಕರರು ಮುಷ್ಕರ ಮಾಡುವಂತಿಲ್ಲ ಎಂಬುದು ತಪ್ಪಾದ ಹೇಳಿಕೆ. ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಹೂಡುವ ಹಕ್ಕನ್ನು ಹೊಂದಿದ್ದಾರೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಸಾರಿಗೆಯಂತಹ ಅತ್ಯವಶ್ಯಕ ಸೇವೆಗಳಲ್ಲಿ ಮುಷ್ಕರವನ್ನು ನಿಷೇಧಿಸಲು ಸರ್ಕಾರ ನಿರ್ದಿಷ್ಟ ಕಾನೂನುಗಳನ್ನು ಜಾರಿಗೊಳಿಸಬಹುದು.

ಮುಷ್ಕರ ಮಾಡುವಂತಿಲ್ಲ ಎಂಬುದು  ತಪ್ಪು: ಸಾರಿಗೆ ನೌಕರರು ಮುಷ್ಕರ ಮಾಡುವಂತಿಲ್ಲ ಎಂಬುದು ಒಂದು ಸಾಮಾನ್ಯ ತಪ್ಪು ಕಲ್ಪನೆ. ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಷ್ಕರ ಹೂಡಲು ಹಕ್ಕನ್ನು ಹೊಂದಿದ್ದಾರೆ. ಆದರೆ, ಕೆಲವು ಸಂದರ್ಭಗಳಲ್ಲಿ, ಸಾರಿಗೆಯಂತಹ ಅತ್ಯಗತ್ಯ ಸೇವೆಗಳಲ್ಲಿ ಮುಷ್ಕರವನ್ನು ನಿಷೇಧಿಸಲು ಸರ್ಕಾರ ನಿರ್ದಿಷ್ಟ ಕಾನೂನುಗಳನ್ನು ಜಾರಿಗೊಳಿಸಬಹುದು.

ಆದರೆ, ಎಸ್ಮಾ ಜಾರಿ ಮಾಡುವುದಕ್ಕೆ ಸೂಕ್ತ ಕಾರಣಗಳನ್ನು ಕೂಡ ಕೊಡಬೇಕು. ಜತೆಗೆ ನೌಕರರ ಮೂಲಭೂತ ಹಕ್ಕುಗಳಲ್ಲಿ ಒಂದಾದ ವೇತನ ಹೆಚ್ಚಳವನ್ನು ಕಾಲಕಾಲಕ್ಕೆ ಮಾಡುತ್ತಿರಬೇಕು. ಅದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಷ್ಕರ ಮಾಡುವ ಹಕ್ಕನ್ನು ಹೊಂದಿದ್ದಾರೆ.

ಹೀಗಾಗಿ ಸರ್ಕಾರ ನೌಕರರನ್ನು ಹೆದುರಿಸುವ ನಿಟ್ಟಿನಲ್ಲಿ ಎಸ್ಮಾ ಜಾರಿ ಮಾಡಿದರೆ ಅದಕ್ಕೆ ಭಯ ಬೀಳುವ ಅಗತ್ಯಲ್ಲ. ಆದರೆ, ನೌಕರರು ಮುಷ್ಕರ ಮಾಡುವುದಕ್ಕೂ 15ದಿನಗಳು ಮುಂಚಿತವಾಗಿ ತಮ್ಮ ಬೇಡಿಕೆಗಳ ಈಡೇರಿಸಿಕೊಳ್ಳುವುದಕ್ಕೆ ನಾವು ಈ ದಿನಾಂಕದಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಲಿಖಿತವಾಗಿ ಎಚ್ಚರಿಕೆ ಪತ್ರ ನೀಡಿದ ನಂತರವು ಸರ್ಕಾರ ಸ್ಪಂದಿಸದಿಂದರೆ, ಬಳಿಕ ಮುಷ್ಕರ ಮಾಡುವುದು ಕಾನೂನಾತ್ಮಕವಾಗಿಯೇ ಇರುತ್ತದೆ.

ಏಕೆಂದರೆ, ನೌಕರರು ವೇತನದಂಥ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಷ್ಕರ ಮಾಡುವುದಕ್ಕೆ ಕಾನೂನಿನಡಿ ಅವಕಾಶವಿದೆ. ಈ ನಡುವೆ ಸರ್ಕಾರಕ್ಕೆ ಮುಷ್ಕರ ಮಾಡುತ್ತೇವೆ ಎಂದು ಲಿಖಿತವಾಗಿ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ಎಸ್ಮಾ ಜಾರಿಮಾಡಿದ್ದೇವೆ ಎಂದು ಸಕಾರಣ ನೀಡದೆ ಎಸ್ಮಾ ಜಾರಿ ಮಾಡಿ ಎದುರಿಸುವುದು ಕೂಡ ಸರ್ಕಾರದ ಅಸಂವಿಧಾನಿಕ ನಡೆಯಾಗುತ್ತದೆ. ಹೀಗಾಗಿ ಸರ್ಕಾರ ನೌಕರರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಅದನ್ನು ಬಿಟ್ಟು ಎಸ್ಮಾ ಅಸ್ತ್ರ ಪ್ರಯೋಗಿಸುವುದು ತರವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Megha
the authorMegha

Leave a Reply

error: Content is protected !!