NEWSನಮ್ಮಜಿಲ್ಲೆನಮ್ಮರಾಜ್ಯಬೆಂಗಳೂರು

BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ

ವಿಜಯಪಥ ಸಮಗ್ರ ಸುದ್ದಿ
  • 2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ
  • ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬನಶಂಕರಿ ಘಟಕ -20ರ ಪ್ರಭಾರ ಘಟಕ ವ್ಯವಸ್ಥಾಪಕನಿಗೆ ಕೋಡು ಬಂದಂತೆ ಕಾಣಿಸುತ್ತಿದೆ.

ಘಟಕದಲ್ಲಿ AWS ಆಗಿರುವ ನಾಗೇಶ್‌ ಎಂಬಾತನನ್ನು ಪ್ರಭಾರ ಡಿಎಂಆಗಿ ಕೂರಿಸಿದ್ದಾರೆ. ಆದರೆ ಈತ ನೌಕರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜತೆಗೆ ಫಾರಂ 4ರಂತೆ ಸುತ್ತುವಳಿ ಪೂರ್ಣಗೊಳಿಸದಿದ್ದರೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಅವಾಚ್ಯವಾಗಿ ನಿಂದಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇದಲ್ಲದೆ ತುರ್ತು ಸಂದರ್ಭದಲ್ಲಿ ರಜೆ ಹಾಕಿದರೆ ಆ ರಜೆಗಳನ್ನು ರಿಜೆಕ್ಟ್‌ ಮಾಡುತ್ತಿದ್ದಾನೆ. ಇದರ ನಡುವೆ ನೌಕರರು ಸಮಸ್ಯೆ ಹೇಳಿಕೊಳ್ಳುವುದಕ್ಕೆ ಈತನ ಕಚೇರಿಗೆ ಹೋದರೆ ನೌಕರರನ್ನು ಸೌಜನ್ಯಕ್ಕೂ ಮಾತನಾಡಿಸುವುದಿಲ್ಲ. ಈತ ಘಟಕವನ್ನು ತನ್ನ ಸ್ವಂತ ಮನೆಯಂತೆ ಮಾಡಿಕೊಂಡಿದ್ದು, ಮೊದಲ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿ ಸಮಸ್ಯೆ ಹೇಳಿಕೊಳ್ಳಲು ನೌಕರರು ಹೋಗುವುದಕ್ಕೆ ಆಗುತ್ತಿಲ್ಲ.

ಕಾರಣ ಈತ ಮಧ್ಯಾಹ್ನ 2ಗಂಟೆ ಬಳಿಕ ತನ್ನ ಕಚೇರಿ ಒಳಗೆ ತನಗೆ ಬೇಕಾದವರನ್ನು ಕೂರಿಸಿಕೊಂಡು ಕೊಠಡಿಯ ಬಾಗಿಲು ಹಾಕಿಕೊಂಡು ಹರಟೆ ಹೊಡೆಯುತ್ತಿರುತ್ತಾನೆ. ಇದರಿಂದ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಡ್ಯೂಟಿ ಮುಗಿಸಿಕೊಂಡು ಬರುವ ನೌಕರರು ಈತ ಬಾಗಿಲು ತೆಗೆಯುವವರೆಗೂ ಗಂಟೆಗಟ್ಟಲೆ ಕಾದು ಕುಳಿತಿರಬೇಕು. ಅಂದರೆ ಘಟಕದಲ್ಲಿ ಈತ ಸರ್ವಾಧಿಕಾರಿಯಾಗಿದ್ದಾನೆ.

ಇನ್ನು ತುರ್ತು ರಜೆ ಹಾಕಿದರೆ ಅದನ್ನು ಕೂಡ ಗಮನಿಸುವುದಿಲ್ಲ. ಅದನ್ನು ಟಿಐ ಚೌಡಯ್ಯ ಎಂಬಾತ ನೋಡಿಕೊಳ್ಳುತ್ತಿದ್ದಾನೆ. ಈತ ತನಗೆ ಬೇಕಾದವರಿಗೆ ವಾರಗಟ್ಟಲೆ ರಜೆ ಕೊಡುವುದಕ್ಕೆ ಶಿಫಾರಸು ಮಾಡುತ್ತಾನೆ. ಉಳಿದ ನೌಕರರ ರಜೆಯನ್ನು ರಿಜೆಕ್ಟ್‌ ಮಾಡುತ್ತಾನೆ. ಈ ತುರ್ತು ರಜೆ ಕೊಡುವುದಕ್ಕೆ ಇವನಿಗೆ ಅಧಿಕಾರ ಕೊಟ್ಟಿರುವ ಡಿಎಂಗೆ ತನ್ನ ಅಧಿಕಾರವನ್ನು ವರ್ಗಾಯಿಸುವ ಅಧಿಕಾರ ಕೊಟ್ಟವರು ಯಾರು?

ಇನ್ನು ಘಟಕದಲ್ಲಿ ಈ ಡಿಎಂ ಮಹಿಳಾ ಕಂಡಕ್ಟರ್‌ಗಳಿಗೆ ಕೊಠಡಿಯ ಕಸಗುಡಿಸುವಂತೆ ಆದೇಶ ಮಾಡುತ್ತಾನೆ. ಈ ಕೆಲಸವನ್ನು ನಾನೇಕೆ ಮಾಡಬೇಕು ಎಂದು ಮಹಿಳಾ ನೌಕರರು ಕೇಳಿದರೆ ನನ್ನನ್ನೇ ಪ್ರಶ್ನೆ ಮಾಡುತ್ತೀಯ ನೀನು ಹೇಗೆ ನನ್ನ ಘಟಕದಲ್ಲಿ ಕೆಲಸ ಮಾಡುತ್ತೀಯೆ ನೋಡುತ್ತೇನೆ ಎಂದು ಹೆದರಿಸುತ್ತಿದ್ದು ಇನ್ನಿಲ್ಲದ ಕಿರುಕುಳವನ್ನು ಕೊಡುತ್ತಿದ್ದಾನೆ.

ಒಟ್ಟಾರೆ ಈತ ಘಟಕದಲ್ಲಿ ಪ್ರಭಾರ ವ್ಯವಸ್ಥಾಪಕನಾಗಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ನೌಕರರ ಜತೆ ಭಾರಿ ವಿಶ್ವಾಸದಿಂದ ಇರುವಂತೆ ನಡೆದುಕೊಳ್ಳುತ್ತಿದ್ದ. ಬರ ಬರುತ್ತ ತನ್ನ ಮೊಸಳೆ ಬುದ್ಧಿಯನ್ನು ಈತ ತೋರಿಸುತ್ತಿದ್ದಾನೆ, ಇದರಿಂದ ಘಟಕದಲ್ಲಿ ನೌಕರರು ಡ್ಯೂಟಿ ಮಾಡುವುದಕ್ಕೆ ಈಗ ಒಂದು ರೀತಿ ಭಯಪಡುತ್ತಿದ್ದಾರೆ.

ಈ ಬಗ್ಗೆ ಮೇಲಧಿಕಾರಿಗಳಿಗೆ ಹೇಳೋಣ ಎಂದರೆ ಎಲ್ಲಿ ನಮ್ಮನ್ನು ಟಾರ್ಗೆಟ್‌ ಮಾಡಿ ಬಿಡುತ್ತಾನೋ ಈತ ಎಂಬ ಭಯದಲ್ಲಿ ನೌಕರರು ಈತನ ವಿರುದ್ಧ ಯಾವುದೇ ರೀತಿಯ ದೂರು ನೀಡಲು ಮುಂದಾಗುತ್ತಿಲ್ಲ.

ಇದರ ನಡುವೆ ಎಷ್ಟೇ ಸಮಯವಾದರೂ ಸರಿಯೇ ಫಾರಂ 4ರಂತೆ ಪೂರ್ಣ ಸುತ್ತುವಳಿ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾನೆ. ಇಲ್ಲ ಸಾರ್‌ ತುಂಬಾ ಟ್ರಾಫಿಕ್‌ ಜಾಂ ಆಗುತ್ತಿದೆ ಇದರಿಂದ ಪೂರ್ಣ ಸುತ್ತುವಳಿ ಮಾಡಲು ಆಗುತ್ತಿಲ್ಲ. ಈ ಬಗ್ಗೆ ನೀವು ಸರ್ವೇ ಮಾಡಿಸಿ ಫಾರಂ -4 ಬದಲಾಯಿಸಲು ಮೇಲಧಿಕಾರಿಗಳಿಗೆ ವಿನಂತಿಸಿ ಎಂದು ನೌಕರರು ಮನವಿ ಮಾಡಿದರೆ, ಇದು ನನ್ನ ಕೆಲಸವಲ್ಲ ನೀನೇನು ಹೇಳಬೇಕಿಲ್ಲ. ನಾನು ಹೇಳಿದಷ್ಟನ್ನು ಮಾತ್ರ ಮಾಡು ಎಂದು ನೌಕರರಿಗೆ ಬೆದರಿಕೆ ಹಾಕುತ್ತಿದ್ದಾನೆ.

ಇನ್ನು ನೌಕರರು ಡ್ಯೂಟಿ ಮಾಡುವುದಕ್ಕೆ ಆಗುತ್ತಿರುವ ಸಮಸ್ಯೆಯನ್ನು ಹೇಳಿಕೊಳ್ಳಲು ಹೋದರೆ ನೀನೇನು ಹೇಳಬೇಡ. ನನಗೆ ಎಲ್ಲ ಗೊತ್ತಿದೆ ಎಂದು ನೌಕರರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳದೆ ಬೈದು ಕಳುಹಿಸುತ್ತಿದ್ದಾನೆ. ಇದರಿಂದ ನೊಂದ ನೌಕರರು ಕಣ್ಣೀರು ಹಾಕುತ್ತಿದ್ದಾರೆ.

ಹೀಗೆ ಈತ ಹಲವು ರೀತಿಯಲ್ಲಿ ನೌಕರರಿಗೆ ಕಿರುಕುಳ ಕೊಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಖುದ್ದು ಘಟಕಕ್ಕೆ ಬಂದು ಪರಿಶೀಲಿಸಬೇಕು. ಜತೆಗೆ ಪೂರ್ಣ ಸುತ್ತುವಳಿ ಮಾಡಲಾಗದ ಮಾರ್ಗಗಳ ಫಾರಂ-4 ಅನ್ನು ಬದಲಾಯಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಘಟಕ 20ರ ಬಹುತೇಕ ಎಲ್ಲ ನೌಕರರು ಒತ್ತಾಯ ಪೂರ್ವಕವಾಗಿ ಮನವಿ ಮಾಡಿದ್ದಾರೆ.

ಈ  ಆರೋಪ ಸಂಬಂಧ ವಿಚಾರಿಸಲು ಡಿಎಂ ನಾಗೇಶ್‌ ಅವರಿಗೆ ವಿಜಯಪಥ ವರದಿಗಾರರು ಹಲವು ಬಾರಿ ಫೋನ್‌ ಮಾಡಿದ್ದರು. ಫೋನ್‌ ಪಿಕ್‌ ಮಾಡಿಲ್ಲ.

Megha
the authorMegha

Leave a Reply

error: Content is protected !!