NEWSಬೆಂಗಳೂರು

ಬೆಂಗಳೂರಿನ ಹಲವೆಡೆ ಹಾಲು, ಮೊಸರು ಮಾರಾಟ ನಿಲ್ಲಿಸಿದ ವರ್ತಕರು: ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಟ್ಯಾಕ್ಸ್ (GST Tax) ಕಟ್ಟುವಂತೆ ನೋಟಿಸ್‌ ನೀಡುವುದಕ್ಕೆ ಅಸಮಾಧಾನ ಹೊರಹಾಕಿರುವ ಸಣ್ಣ ವರ್ತಕರು ಇಂದಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಮತ್ತು ನಾಳೆ ಹಾಲು ಮಾರಾಟ ನಿಲ್ಲಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟ ಬೆನ್ನಲ್ಲೆ ಇಂದಿನಿಂದ ಬೇಕರಿ ಕಾಂಡಿಮೆಂಟ್‌ಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ. ಹಲವು ಕಾಂಡಿಮೆಂಟ್, ಬೇಕರಿಗಳಲ್ಲಿ ಬೆಳಗ್ಗೆಯೇ ನೋ ಟೀ ಕಾಫಿ, ಓನ್ಲಿ ಲೆಮನ್ ಟೀ, ಬ್ಲ್ಯಾಕ್ ಟೀ ಅನ್ನೋ ಬೋರ್ಡ್‌ಗಳನ್ನು ಹಾಕಿ ಜತೆಗೆ ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಇನ್ನು ಬೆಂಗಳೂರಿನ ರಾಜಾಜಿನಗರದ ಕಾಂಡಿಮೆಟ್ಸ್‌ಗಳಲ್ಲಿ ಇಂದು, ನಾಳೆ ಹಾಲು ಮಾರಾಟ ಸ್ಥಗಿತಗೊಳಿಸಲಾಗಿದೆ. ಟೀ, ಕಾಫಿ ಸಿಗಲ್ಲ.. ಏನಿದ್ರೂ ಲೆಮೆನ್ ಮತ್ತು ಬ್ಲ್ಯಾಕ್ ಟೀ ಸಿಗುತ್ತೆ ಎಂದು ಗ್ರಾಹಕರಿಗೆ ಬೋರ್ಡ್ ಮೂಲಕ ತಿಳಿಸಿ ನಮಗೆ ಸಹಕರಿಸಬೇಕು ಎಂದು ಕೋರುತ್ತಿದ್ದಾರೆ.

ರಾಜಾಜಿನಗರದ ಕೆಲವು ಕಾಂಡಿಮೆಂಟ್ಸ್‌ಗಳಲ್ಲಿ ಹಾಲು ಮಾರಾಟ ಬಂದ್ ಮಾಡಲಾಗಿದೆ. ಹಲವು ಕಡೆ ಹಾಲು ಮಾರಾಟ ಮಾಡುತ್ತಿಲ್ಲ. ಎರಡು ದಿನ ಹಾಲು ಮಾರಾಟ ಆಗದೇ ಹೋದರೆ ನಷ್ಟ ಆದರೂ ಪರವಾಗಿಲ್ಲ, ನ್ಯಾಯ ಸಿಗಬೇಕು ಎನ್ನುತ್ತಿದ್ದಾರೆ ವರ್ತಕರು.

ಇನ್ನು ಇಂದಿನಿಂದ ಟ್ಯಾಕ್ಸ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ. ಟೀ, ಕಾಫಿಯಲ್ಲಿ ಹಾಲು ಬಳಸುವುದಿಲ್ಲ. ಲೆಮೆನ್ ಮತ್ತು ಬ್ಲ್ಯಾಕ್‌ ಟೀ ಅಷ್ಟೇ ಮಾರುತ್ತೇವೆ ಎಂದು ಸಣ್ಣ ವರ್ತಕರು ಮಾಧ್ಯಗಳಿಗೆ ಹೇಳಿಕೆ ನೀಡುತ್ತಿದ್ದಾರೆ.

ಈ ನಡುವೆಯೂ ನಗರದ ಹಲವು ಕಡೆ ಎಂದಿನಂತೆ ಹಾಲು ಮಾರಾಟ ನಡೆಯುತ್ತಿದೆ. ಇಂದು ಕಾರ್ಮಿಕ ಪರಿಷತ್‌ನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮನವಿ ಮಾಡಲಿದ್ದಾರೆ. ಬಸವೇಶ್ವರ ನಗರ, ಮಾಗಡಿ ರಸ್ತೆ ಸುತ್ತಮುತ್ತ ಪ್ರತಿಭಟನೆಗೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Megha
the authorMegha

Leave a Reply

error: Content is protected !!