
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಲೆಕ್ಕಪತ್ರ ಶಾಖೆಯ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ ಜಿ. ರಿಚರ್ಡ್ ಎಂಬಾತ ನಿಗಮದ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರ ಸಹಿಯನ್ನೇ ನಕಲು ಮಾಡಿ ನೌಕರರಿಗೆ ಲಕ್ಷ ಲಕ್ಷ ರೂ. ವಂಚಿಸಿರುವ ಆರೋಪದ ಮೇರೆಗೆ ಆತನನ್ನು ಗುರವಾರ (ಜು.24) ಅಮಾನತು ಮಾಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಜಿ.ರಿಚರ್ಡ್ ನಿಗಮದ ಇಬ್ಬರು ಸಿಬ್ಬಂದಿಗಳಿಗೆ ನಕಲಿ ಸಹಿ ತೋರಿಸಿ ಯಾಮಾರಿಸಿದ್ದಾನೆ. ಸಂತ್ರಸ್ತ ಸಿಬ್ಬಂದಿಗಳಿಂದ 1.35 ಲಕ್ಷಕ್ಕಿಂತಲೂ ಹೆಚ್ಚು ಹಣ ಪೀಕಿದ್ದಾನೆ. ರಿಚರ್ಡ್ ಇದೇ ರೀತಿ ಹಲವು ಸಿಬ್ಬಂದಿಗಳಿಗೂ ಎಂಡಿ ಸಹಿ ನಕಲು ಮಾಡಿ ವಂಚಿಸಿರುವ ಆರೋಪವಿದೆ.
ಇನ್ನು ಶಿವಮೊಗ್ಗ ವಿಭಾಗದ ಸಾಗರ ಘಟಕದ ನಾಗರಾಜಪ್ಪ ಎಂಬುವರು ಸೇರಿದಂತೆ ಮೂವರು ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ನಾಗರಾಜ್ ಎಂಬುವ ವಜಾ ಆದೇಶ ರದ್ದು ಮಾಡಿ ಮತ್ತೆ ಡ್ಯೂಟಿಗೆ ಬರುವಂತೆ ಮಾಡಿಸಿಕೊಡುವುದಾಗಿ ಹೇಳಿ ರಿಚರ್ಡ್ ಹಣ ಪಡೆದು ವಂಚಿಸಿದ್ದಾನೆ.
ಇನ್ನು ಈ ನಾಗರಾಜ್‌ಗೆ ನಮ್ಮ ಎಂಡಿ ಅನ್ಬುಕುಮಾರ್ ಸಹಿಯಾಗಿದೆ ಹಣ ಕಳುಹಿಸಿಕೊಟ್ರೆ ಆದೇಶ ಪತ್ರ ರವಾನೆ ಮಾಡುತ್ತೇನೆ ಎಂದು ಹೇಳಿ ಯಾಮಾರಿಸಿದ್ದ. ರಿಚರ್ಡ್ ಕೆಳಗಿನವರಿಂದ ಮೇಲಿನವರ ಕೈ ಬಿಸಿ ಮಾಡ್ಬೇಕೆಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಇನ್ನು ಕೆಲಸ ಆಯ್ತಲ್ಲ ಎಂಬ ಸಮಾಧಾನದಲ್ಲಿ ಗೂಗಲ್ ಪೇನಲ್ಲಿ ನಾಗರಾಜ್ ಹಣ ರವಾನಿಸಿದ್ದ. ಆ ಬಳಿಕ ಅಂಚೆಯಲ್ಲಿ ಬರಬೇಕಾದ ನೇಮಕಾತಿ ಪತ್ರ ವಾಟ್ಸಪ್ನಲ್ಲಿ ರಿಚರ್ಡ್ ಕಳುಹಿಸಿದ್ದ. ಈ ವೇಳೆ ನಾಗರಾಜ್ ಅನುಮಾನದಿಂದ ಸಾರಿಗೆ ಸ್ನೇಹಿತರಿಗೆ ತೋರಿಸಿದಾಗ ವಂಚನೆ ಮಾಡಿರುವುದು ಬಯಲಾಗಿದೆ.
ನಿಗಮದ ಸಿಬ್ಬಂದಿಗಳಿಗೆ ರಿಚರ್ಡ್ ವಂಚನೆ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಪೂರ್ವ ಅಮಾನತು ಮಾಡಿ ಶಿಸ್ತುಪಾಲನ ಅಧಿಕಾರಿಯೂ ಆದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.



Related









