NEWSನಮ್ಮಜಿಲ್ಲೆನಮ್ಮರಾಜ್ಯ

BMTC ನೌಕರರಿಂದ ಅನುಮತಿ ಇಲ್ಲದೆ ಚಂದಾ ವಸೂಲಿ ಮಾಡುವಂತಿಲ್ಲ-ಸಿಪಿಎಂ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕಗಳಲ್ಲಿ ಸಂಸ್ಥೆಯ ಯಾವುದೇ ಅಧಿಕಾರಿ /ನೌಕರು ಪೂರ್ವ ಮಂಜೂರಾತಿ ಪಡೆಯದೆ ಚಂದಾ ವಸೂಲಿ ಮಾಡಬಾರದು ಎಂದು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಇನ್ನು ಮುಂದೆ ಸಂಸ್ಥೆಯ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಪ್ರಾಂಶುಪಾಲರು, ಎಲ್ಲ ಹಿರಿಯ- ಘಟಕ ವ್ಯವಸ್ಥಾಪಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಗುರುವಾರ (ಜು.24) ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಹೊರಡಿಸಿರುವ ಆದೇಶ ತಿಳಿಸಿದ್ದಾರೆ.

ಏಕೆಂದರೆ ಈ ವಿಷಯಕ್ಕೆ ಸಂಬಂಧಿಸಿದಂತೆ, ಘಟಕಗಳಲ್ಲಿ ವರ್ಗಾವಣೆ ಅಥವಾ ನಿವೃತ್ತಿಯಾದಾಗ ಬಲವಂತವಾಗಿ ನೌಕರರಿಂದ ಚಂದಾ ಹಣ ವಸೂಲಿ ಮಾಡಿ ಕೊಡುಗೆಗಳನ್ನು ನೀಡುತ್ತಿರುವ ಬಗ್ಗೆ ದೂರನ್ನು ಸ್ವೀಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸಂಸ್ಥೆಯಲ್ಲಿ ಪೂರ್ವ ಮಂಜೂರಾತಿ ಪಡೆಯದೆ ಚಂದಾ ಕೋರಬಾರದು ಎಂಬುದರ ಸುತ್ತೋಲೆ ಹೊರಡಿಸಲಾಗಿದೆ. ಈ ಸುತ್ತೋಲೆಯಲ್ಲಿ “ಸಂಸ್ಥೆಯ ಯಾರೇ ನೌಕರನು ಸಂಸ್ಥೆಯ ಅಥವಾ ಸಂಸ್ಥೆ ನಿರ್ದಿಷ್ಟ ಪಡಿಸುವಂತಹ ಅಧಿಕಾರಿಗಳ ಪೂರ್ವ ಮಂಜೂರಾತಿಯನ್ನು ಪಡೆಯದೆ ಯಾವುದೇ ರೀತಿಯ ಉದ್ದೇಶ ಸಾಧನೆಗಾಗಿ ಚಂದಾ ಕೋರಬಾರದು ಅಥವಾ ಸ್ವೀಕರಿಸಬಾರದು ಅಥವಾ ಯಾವುದೇ ನಿಧಿ ಸಂಗ್ರಹಣೆ ಅಥವಾ ನಗದು ವಸ್ತು ರೂಪದಲ್ಲಿ ಇತರ ಸಂಗ್ರಹಣೆಗಳನ್ನು ಮಾಡುವ ಕಾರ್ಯದಲ್ಲಿ ಬೇರೆ ರೀತಿಯಲ್ಲಿ ಸಹಕರಿಸತಕ್ಕದ್ದಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಅದರಂತೆ ಸಂಸ್ಥೆಯ ಯಾವುದೇ ನೌಕರರು ಪೂರ್ವ ಮಂಜೂರಾತಿ ಇಲ್ಲದೆ ಚಂದಾ ವಸೂಲು ಮಾಡುವುದು ಅಥವಾ ಸ್ವೀಕರಿಸುವುದು ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು & ನಡತೆ ನಿಯಮಾವಳಿಗಳು 1971 ರನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಆದುದರಿಂದ ಈ ಸುತ್ತೋಲೆಯಲ್ಲಿ ತಿಳಿಸಿರುವ ಅಂಶಗಳನ್ನು ಯಾವುದೇ ದೂರಿಗೆ ಆಸ್ಪದ ನೀಡದೇ ಕಟ್ಟುನಿಟ್ಟಾಗಿ ಪಾಲನೆ ಮಾಡಲು ತಮ್ಮ ಅಧೀನ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ/ ತಿಳಿವಳಿಕೆ ನೀಡಲು ತಿಳಿಸಿದ್ದು, ಈ ಸುತ್ತೋಲೆ ನೌಕರರ ಗಮನಕ್ಕೆ ಸೂಚನಾ ಫಲಕಕ್ಕೆ ಪ್ರಕಟಿಸಿ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

ನೌಕರರಿಂದ ಬಹುತೇಕ ಎಲ್ಲ  ಘಟಕಗಳಲ್ಲೂ  ಮಹಾನೀಯರ ಜಯಂತಿ ಹೆಸರಿನಲ್ಲಿ ಹಾಗೂ ಗಣೇಶ ಹಬ್ಬ ಹೀಗೆ ವಿವಿಧ ಹೆಸರಿನಲ್ಲಿ ಚಂದಾ ವಸೂಲಿ ಮಾಡುವುದಕ್ಕೆ ಕೆಲ ನೌಕರರು ಡಿಪೋಗಳಲ್ಲಿ ಡ್ಯೂಟಿ ಬಿಟ್ಟು ನಿಲ್ಲುತ್ತಿದ್ದಾರೆ ಎಂಬ ಬಗ್ಗೆಯೂ ಆರೋಪವಿದೆ.

ಇದರ ಜತೆಗೆ ನೌಕರರು ಕೊಟ್ಟಷ್ಟು ಹಣವನ್ನು ತೆಗೆದುಕೊಳ್ಳದೆ ನೀವು 500 ರೂ. 1000 ರೂ.ಗಳನ್ನೇ ಕೊಡಬೇಕು ಇಲ್ಲದಿದ್ದರೆ  ನಿಮಗೆ ಎಲ್ಲಿ ಪಾಠ ಕಲಿಸಬೇಕೋ ಅಲ್ಲೇ ಕಲಿಸುತ್ತೇವೆ ಎಂಬ ದಮ್ಕಿ ಕೂಡ ಹಾಕಿರುವುದು ಹಾಗೂ ನೌಕರರಿಗೆ ಇದರಿಂದ ಮಾನಸಿಕ ಕಿರುಕುಳ ಕೊಟ್ಟಿರುವ ಬಗ್ಗೆಯೂ ಆರೋಪ ಕೇಳಿ ಬರುತ್ತಿದೆ.

ಅಲ್ಲದೆ ಈ ಚಂದಾ ಹಣ ವಸೂಲಿ ಮಾಡುವುದಕ್ಕೆ ಅಲ್ಲಿನ ಅಧಿಕಾರಿಗಳು ಕೂಡ ಪರೋಕ್ಷವಾಗಿ ನಿಲ್ಲುತ್ತಿದ್ದಾರೆ. ಚಂದಾ ವಸೂಲಿ ಮಾಡುವವರಿಗೆ ಡ್ಯೂಟಿ ಕೊಡದೆ ಒಒಡಿ ಹೆಸರಿನಲ್ಲಿ ಡಿಪೋಗಳಲ್ಲೇ ಉಳಿಸಿಕೊಂಡು ವಸೂಲಿ ಮಾಡಿಸುತ್ತಿದ್ದಾರೆ ಅಧಿಕಾರಿಗಳು ಎಂಬ ಆರೋಪವನ್ನು  ನೌಕರರು ಮಾಡಿದ್ದಾರೆ.

ಇದನ್ನು ಗಮನಿಸಿದ ಕೆಲ ನೌಕರರು ಸಂಸ್ಥೆಯ ಕೇಂದ್ರ ಕಚೇರಿಗೆ ದೂರಿ ನೀಡಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಚಂದಾ ಹಣ ವಸೂಲಿ ಹೆಸರಿನಲ್ಲಿ ದೌರ್ಜನ್ಯಕ್ಕೆ ಒಳಗಾದ ನೌಕರರು ವಿಜಯಪಥಕ್ಕೆ ಮಾಹಿತಿ ನೀಡಿ ಈ ಆದೇಶ ಹೊರಡಿಸಿರುವುದಕ್ಕೆ ಖುಷಿ ಪಟ್ಟಿದ್ದಾರೆ.

Megha
the authorMegha

Leave a Reply

error: Content is protected !!