ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇದೇ ಆ.5ರಿಂದ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಅಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ನೌಕರರ ಎಲ್ಲ ಸಂಘಟನೆಗಳ ಸಭೆಯನ್ನು ಆ.4ರಂದು ವಿಧಾನಸೌಧದ ಮೂರನೇ ಮಹಡಿಯ ಸಮಿತಿ ಕೊಠಡಿಯಲ್ಲಿ ಕರೆಯಲಾಗಿದೆ.
ಈ ಹೈ ವೋಲ್ಟೆಜ್ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದು, ಅಂದು ಬೆಳಗ್ಗೆ 11.45ಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೂ ಹಾಗೂ ಮಧ್ಯಾಹ್ನ 12.15ಕ್ಕೆ ನೌಕರರ ಒಕ್ಕೂಟದೊಂದಿಗೆ ಸಭೆಯನ್ನು ಮುಖ್ಯಮಂತ್ರಿಗಳ ನಿರ್ದೇಶನದಂತೆ ನಿಗದಿಪಡಿಸಲಾಗಿದೆ ಎಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಕೆ.ಚಿರಂಜಿವಿ ತಿಳಿಸಿದ್ದಾರೆ.
ಇದೇ ರೀತಿ ಬೇಡಿಕೆಗಳ ಕುರಿತು ಜುಲೈ 4ರಂದು ಸಂಜೆ ಹೈ ವೋಲ್ಟೆಜ್ ಸಭೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದಿತ್ತು. ಆದರೆ, ಸಿಎಂ ಸಂಘಟನನೆಗಳೊಂದಿಗೆ ಸರಿಯಾಗಿ ಚರ್ಚಿಸದ ಕಾರಣ ಅರ್ಧಕ್ಕೆ ಸಭೆ ಮೊಟಕುಗೊಂಡಿತ್ತು. ಆ ಬಳಿಕ ವಾರದೊಳಗೆ ಸಭೆ ಕರೆಯುವುದಾಗಿ ತಿಳಿಸಿ ಮತ್ತೆ ಕರೆಯಲೇ ಇಲ್ಲ. ಇದರಿಂದ ರೊಚ್ಚಿಗೆದ್ದ ಜಂಟಿ ಕ್ರಿಯಾ ಸಮಿತಿ ಆ.5ರಿಂದ ಮುಷ್ಕರಕ್ಕೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಅವರೇ ಖುದ್ದು ಸಭೆ ಆಯೋಜನೆ ಮಾಡಲು ಸೂಚಿಸಿದ್ದಾರೆ.
ಈ ಹಿಂದೆ ಅಂದರೆ ಜುಲೈ 4ರಂದು ಕರೆದಿದ್ದ ಸಭೆಗೆ ಸ್ಥಳಾವಕಾಶದ ಲಭ್ಯತೆಯ ದೃಷ್ಟಿಯಿಂದ ಪ್ರತಿ ಸಂಘಟನೆಯಿಂದ ಇಬ್ಬರು ಪದಾಧಿಕಾರಿಗಳು ಮಾತ್ರ ಹಾಜರಾಗಬೇಕು ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಈ ಬಾರಿ ಅಂಥ ಯಾವುದೇ ನಿರ್ಬಂಧ ಹಾಕಿಲ್ಲ.
ಬೇಡಿಕೆಗಳೇನು?: ನಾಲ್ಕೂ ನಿಗಮಗಳ ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಆಗಬೇಕಿರುವ ಬಗ್ಗೆ ಚರ್ಚಿಸಲು ಈ ಹೈ ವೋಲ್ಟೆಜ್ ಸಭೆ ಕರೆಯಲಾಗಿದೆ.

ಈ ಸಂಬಂಧ ಈ ಹಿಂದೆಯೇ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟವೂ ನೌಕರರ ವೇತನ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆ ಈಡೇರಿಕೆ ಬಗ್ಗೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳು ಸೇರಿದಂತೆ ಪ್ರಮುಖರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಸೇರಿದಂತೆ ಇತರೆ ಬೇಡಿಕೆಗಳ ಕುರಿತು ಚರ್ಚಿಸಲು ಏ.15ರ ಮುಖ್ಯಮಂತ್ರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದರು. ಆ ಬಳಿಕ ಜುಲೈ 4ರಂದು ಸಭೆ ಕರೆದು ಆ ನಂತರ ವಾರದೊಳಗೆ ಮತ್ತೆ ಸಭೆಕರೆಯುವುದಾಗಿ ತಿಳಿಸಿ ಈವರೆಗೂ ಸಿಎಂ ಸಭೆಯನ್ನೇ ಕರೆದಿರಲಿಲ್ಲ. ಹೀಗಾಗಿ ನೌಕರರು ತೀವ್ರ ಅಸಮಾಧಾನಗೊಂಡಿದ್ದಾರೆ.
ಕಳೆದ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಇನ್ನು ನೌಕರರಿಗೆ ಸಿಕ್ಕಿಲ್ಲ. ಜತೆಗೆ ಈಗಾಗಲೇ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಅವಧಿ ಮುಗಿದು 18 ತಿಂಗಳು ಕಳೆದರೂ ಆ ಬಗ್ಗೆಯೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
ಈ ಹಿನ್ನೆಲೆಯಲ್ಲಿ ಸರ್ಕಾರ ಆ.4ರಂದು ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟಗಳ ಸಭೆ ಕರೆದಿದ್ದು ಬಹುತೇಕ ಅಂತಿಮ ನಿರ್ಧಾರಕ್ಕೆ ಸರ್ಕಾರ ಬರಲಿದೆ. ಒಂದು ವೇಳೆ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಷ್ಕರ ಮಾಡುವುದಕ್ಕೆ ಈಗಾಗಲೇ ಸಂಘಟನೆಗಳ ಗೇಟ್ ಮೀಟಿಂಗ್‌ಗಳನ್ನು ಮಾಡಿಕೊಂಡು ಸಿದ್ಧವಾಗಿವೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಆ.4ರಂದು ಕಾರ್ಮಿಕ ಸಂಘಟನೆಗಳ ಸಭೆ ಕರೆದಿದ್ದು ಖುದ್ದು ಮುಖ್ಯಮಂತ್ರಿಗಳೇ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಇನ್ನು ಸಭೆಯಲ್ಲಿ ಸರ್ಕಾರ ಚುನಾವಣಾ ಪೂರ್ವದಲ್ಲಿ ನೌಕರರಿಗೆ ಕೊಟ್ಟಿರುವ ಸರಿ ಸಮಾನ ವೇತನ ಕೊಡಲು ಒಪ್ಪುತ್ತದೋ ಇಲ್ಲ 4ವರ್ಷಗಳಿಗೊಮ್ಮೆ ನಡೆಯುತ್ತಿರುವ ವೇತನ ಪರಿಷ್ಕರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಿದೆ.
Related
