ಸಾರಿಗೆ ಮುಷ್ಕರ ನಡೆದರೆ ಬಸ್ ಓಡಿಸಿ: ಖಾಸಗಿ ಬಸ್ ಮಾಲೀಕರಿಗೆ ಸರ್ಕಾರ ಮನವಿ- ಬೇಡಿಕೆ ಮುಂದಿಟ್ಟ ಬಸ್ ಮಾಲೀಕರು


- ಖಾಸಗಿ ಬಸ್‌ಗಳನ್ನು ಉಚಿತವಾಗಿ ಓಡಿಸಲು ಸಾಧ್ಯವಾ? ಸರ್ಕಾರಕ್ಕೆ ಶುರುವಾಯಿತು ತಲೆನೋವು
ಬೆಂಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಸಾರಿಗೆ ನಿಗಮಗಳ ನೌಕರರು ಆ.5 ರಂದು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಸಾರಿಗೆ ಇಲಾಖೆಯ ನಿದ್ದೆಗೆಡ೮ಸಿದೆ.
ಈಗಾಗಲೇ ನೌಕರರ ಜತೆ ಹಲವು ಸುತ್ತಿನ ಸಭೆ ನಡೆಸಿದರೂ ಕೂಡ ನೌಕರರನ್ನು ಸಮಾಧಾನಪಡಿಸಲು ವಿಫಲವಾಗಿದೆ ಸರ್ಕಾರ. ಹೀಗಾಗಿ ಆ.5 ಮುಷ್ಕರ ದಟ್ಟವಾಗಿದ್ದು, ಪ್ರಯಾಣಿಕರ ಗತಿಯೇನು ಎಂಬ ಆತಂಕ ಹೆಚ್ಚಾಗಿದೆ.
ಹೀಗಾಗಿ ಮುಷ್ಕರದ ವೇಳೆ ಎದುರಾಗಬಹುದಾದ ಅನಾನುಕೂಲ, ಅವಾಂತರಗಳನ್ನು ತಪ್ಪಿಸಲು ಸಾರಿಗೆ ಇಲಾಖೆ ಪರ್ಯಾಯ ವ್ಯವಸ್ಥೆ ಏನು ಎಂಬುದರ ಬಗ್ಗೆ ಚಿತ್ತ ಹರಿಸಿದೆ. ಹೀಗಾಗಿ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖರ ಜತೆ ಸಾರಿಗೆ ಇಲಾಖೆ ಮಹತ್ವದ ಸಭೆ ನಡೆಸಿದೆ. ಆದರೆ ಖಾಸಗಿ ಬಸ್ ಮಾಲೀಕರ ಸಂಘ ಕೂಡ ಹಲವು ಬೇಡಿಕೆಗಳನ್ನು ಇಲಾಖೆಯ ಮುಂದಿಟ್ಟಿದ್ದು, ಇನ್ನಷ್ಟು ತಲೆಬಿಸಿಯಾಗುವಂತೆ ಮಾಡಿದೆ.
ಹೌದು! ಇಂದು ನಡೆದ ಸಭೆಯಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್, ಅಪರ ಆಯುಕ್ತ ಮಲ್ಲಿಕಾರ್ಜುನ್ ಸೇರಿ ಹಿರಿಯ ಅಧಿಕಾರಿಗಳು ಭಾಗಿ ಆಗಿದ್ದರು. ಈ ವೇಳೆ ಖಾಸಗಿ ಬಸ್ ಮಾಲೀಕರಿಗೆ ಮನವಿ ಮಾಡಿರುವ ಸಾರಿಗೆ ಇಲಾಖೆ, ಮುಷ್ಕರ ಶುರುವಾದರೆ ಖಾಸಗಿ ಬಸ್‌ಗಳ ಮೂಲಕ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಸೇವೆ ಒದಗಿಸಿ ಎಂದು ಹೇಳಿದ್ದಾರೆ.
ಖಾಸಗಿ ಸಾರಿಗೆ ಸಂಘಟನೆಗಳ ಮುಖಂಡರಿಂದಲೂ ಅನೇಕ ಬೇಡಿಕೆ: ಸಭೆಯಲ್ಲಿ ಭಾಗಿ ಆಗಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಪ್ರಮುಖರು, ಮುಷ್ಕರದ ವೇಳೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ಸರ್ಕಾರಿ ನಿಗಮ ಬಸ್‌ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸಲು ಹಲವು ಬೇಡಿಕೆ ಮುಂದಿಟ್ಟಿದ್ದಾರೆ.
ಪ್ರಮುಖ ಬೇಡಿಕೆಗಳೇನು?:1. ಸಮಾನ ಪರವಾನಗಿ ವಿತರಣೆ 60:40 ಪರವಾನಗಿ ಅನುಪಾತವನ್ನು ಜಾರಿಗೆ ತರಲು ತಕ್ಷಣದ ಕ್ರಮಗಳನ್ನು ಪ್ರಾರಂಭಿಸಬೇಕು, ಇದರಲ್ಲಿ ಶೇ.60 ಸ್ಟೇಜ್ ಕ್ಯಾರೇಜ್ ಪರವಾನಗಿಗಳನ್ನು ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಹಂಚಲಾಗುತ್ತದೆ. ಶೇ.40 ಖಾಸಗಿ ನಿರ್ವಾಹಕರಿಗೆ ಮೀಸಲಿಡಲಾಗುತ್ತದೆ

2. ಮುಷ್ಕರದ ಅವಧಿಯಲ್ಲಿ ತಮ್ಮ ಸೇವೆಗಳನ್ನು ವಿಸ್ತರಿಸುವ ಖಾಸಗಿ ಸ್ಟೇಜ್ ಕ್ಯಾರೇಜ್ ನಿರ್ವಾಹಕರಿಗೆ ಕನಿಷ್ಠ 15 ದಿನಗಳವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು.
3. ಡಿಜಿಟಲ್ ಸರ್ವೈಲೆನ್ಸ್ ಆಡಿಟ್ ಪ್ರಕರಣಗಳ ಅಡಿಯಲ್ಲಿ ವಿಧಿಸಲಾದ ದಂಡದ ಶೇ. 50 ವಿನಾಯಿತಿಯನ್ನು ಖಾಸಗಿ ನಿರ್ವಾಹಕರಿಗೆ ವಿಸ್ತರಿಸಬೇಕು.
4. ಅಧಿಸೂಚಿತ ಸಮಯ ಮತ್ತು ಮಾರ್ಗಗಳನ್ನು ಅನಧಿಕೃತವಾಗಿ ಅತಿಕ್ರಮಿಸುವ ಸರ್ಕಾರಿ (STU) ಬಸ್‌ಗಳ ವಿರುದ್ಧ ತಕ್ಷಣದ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಈ ನಡುವೆ ಆ.4 ರಂದು ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮುಷ್ಕರಕ್ಕೆ ಮುಂದಾಗಿರುವ ನೌಕರರೊಂದಿಗೆ ನಿರ್ಣಾಯಕ ಸಭೆ ನಡೆಸಲಿದ್ದು, ಅಂದು ಆ.5 ರಂದು ಮುಷ್ಕರದ ಭವಿಷ್ಯ ತೀರ್ಮಾನವಾಗಲಿದೆ. ಒಟ್ಟಾರೆ ಈ ಎಲ್ಲ ವಿದ್ಯಮಾನಗಳ ಮಧ್ಯೆ ರಾಜ್ಯದ ಲಕ್ಷಾಂತರ ಪ್ರಯಾಣಿಕರು ಆತಂಕದಲ್ಲಿ ಇರುವುದಂತೂ ನಿಜ. ಜತೆಗೆ ಉಚಿತ ಪ್ರಯಾಣಕ್ಕೆ ಖಾಸಗಿ ಬಸ್‌ಗಳನ್ನು ಸರ್ಕಾರ ಹೇಗೆ ಬಳಸಿಕೊಳ್ಳುತ್ತದೆ ಎಂಬ ತಲೆನೋವು ಕೂಡ ಸಾರಿಗೆ ಇಲಾಖೆಗೆ ಶುರುವಾಗಿದೆ.
Related
