NEWSನಮ್ಮಜಿಲ್ಲೆನಮ್ಮರಾಜ್ಯ

ಸಾಧ್ಯವಾದಷ್ಟು ಬೇಗ ಸರ್ಕಾರ ನಮ್ಮೊಡನೆ ಮಾತುಕತೆ ಪುನರಾರಂಭಿಸಿ ಬೇಡಿಕೆ ಇತ್ಯರ್ಥ ಪಡಿಸಲಿ: ಎಂಡಿಗೆ ಮನವಿ ಸಲ್ಲಿಸಿದ ಸಮಿತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾಧ್ಯವಾದಷ್ಟು ಬೇಗ ಸರ್ಕಾರವು ನಮ್ಮೊಡನೆ ಮಾತುಕತೆಗಳನ್ನು ಪುನರಾರಂಭಿಸಿ ನಮ್ಮ ಬೇಡಿಕೆಗಳನ್ನು ಇತ್ಯರ್ಥ ಪಡಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಅವರನ್ನು ಭೇಟಿ ಮನವಿ ಸಲ್ಲಿಸಿತು.

ಸೋಮವಾರ ಶಾಂತಿನಗರದ ಅವರ ಕಚೇರಿಯಲ್ಲಿ ಭೇಟಿ ಮಾಡಿದ ಕ್ರಿಯಾ ಸಮಿತಿ ಪದಾಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ, ಅವರಿಗೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಬೇಡಿಕೆಗಳು ಏನು? 1)ಸಾಧ್ಯವಾದಷ್ಟು ಬೇಗ ಸರ್ಕಾರವು ನಮ್ಮೊಡನೆ ಮಾತುಕತೆಗಳನ್ನು ಪುನರಾರಂಭಿಸಿ ನಮ್ಮ ಬೇಡಿಕೆಗಳನ್ನು ಇತ್ಯರ್ಥ ಪಡಿಸಬೇಕು. 2) ಚಾರ್ಜ್ ಶೀಟ್, ಶೋಕಾಸ್ ನೋಟೀಸ್ ಹಾಗೂ ಇತರೆ ಎಲ್ಲ ಶಿಸ್ತಿನ ಕ್ರಮಗಳನ್ನು ಬೇಷರತ್ತಾಗಿ ರದ್ದು ಮಾಡಬೇಕು.

3) ಉಚ್ಚ ನ್ಯಾಯಲಯದ ನಿರ್ದೇಶನದಂತೆ ಮುಷ್ಕರವನ್ನು ಕೈ ಬಿಟ್ಟಿದ್ದೇವೆಯೇ ವಿನಃ ಮುಷ್ಕರ ವಿಫಲವಾಗಿದೆ ಎಂಬ ಭಾವನೆಯಿಂದ ಅಧಿಕಾರಿಗಳು ಯಾವುದೇ ಹಂತದಲ್ಲೂ ನೌಕರರನ್ನು ಅಗೌರವದಿಂದ ನಡೆಸಿಕೊಳ್ಳಬಾರದು.

4) ಮುಷ್ಕರಕ್ಕೂ ಮುಂಚೆ ಅಥವಾ ಮುಷ್ಕರದ ಸಂದರ್ಭದಲ್ಲಿ ಯಾವುದಾದರೂ ನೌಕರನನ್ನು ಅಥವಾ ಅಧಿಕಾರಿಯನ್ನು ಅವರ ಇಷ್ಟದ ವಿರುದ್ಧ ವರ್ಗಾವಣೆ ಮಾಡಿದ್ದಲ್ಲಿ ಅಂತಹ ವರ್ಗಾವಣೆಯನ್ನು ರದ್ದು ಮಾಡಬೇಕು ಎಂಬ ಈ ನಾಲ್ಕೂ ಬೇಡಿಕೆಗಳನ್ನು ಸಲ್ಲಿಸಲಾಯಿತು.

ಈ ವೇಳೆ ಸಾವಧಾನದಿಂದ ಮನವಿಯನ್ನು ಆಲಿಸಿದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಅವರು, ಸರ್ಕಾರದೊಡನೆ ಮಾತುಕತೆ ನಡೆಸುವುದಾಗಿಯೂ ಹಾಗೂ ಉಳಿದಂತೆ ಯಾವುದೇ ಸೇಡಿನ ಕ್ರಮವನ್ನು ತೆಗೆದುಕೊಳ್ಳುವ ಉದ್ದೇಶವಿಲ್ಲವೆಂದು ಭರವಸೆ ನೀಡಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಈಗ ಕೊಟ್ಟಿರುವ ಎಲ್ಲ ಆಪಾದನಾ ಪತ್ರ / ಶೋಕಾಸ್ ನೋಟೀಸ್‌ಗಳನ್ನು ರದ್ದು ಮಾಡಿ ಒಳ್ಳೆಯ ವಾತಾವರಣ ಸೃಷ್ಟಿಸಬೇಕೆಂದು ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಎಂಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಕಾರ್ಮಿಕರು ಯಾರು ಆತಂಕ ಪಡುವ ಅವಶ್ಯಕತೆ ಇಲ್ಲವೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಎಚ್.ವಿ.ಅನಂತ ಸುಬ್ಬರಾವ್, ಬಿ.ಜಯದೇವರಾಜೇ ಅರಸು, ಎಚ್.ಡಿ. ರೇವಪ್ಪ, ವೆಂಕಟರವಣಪ್ಪ, ಸೋಮಣ್ಣ ಹಾಗೂ ಎಚ್.ಆರ್. ಜಗದೀಶ ಮತ್ತಿತರರು ಇದ್ದರು.

Megha
the authorMegha

Leave a Reply

error: Content is protected !!