NEWSದೇಶ-ವಿದೇಶನಮ್ಮರಾಜ್ಯ

ಆ.15ರಿಂದ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭ

ವಿಜಯಪಥ ಸಮಗ್ರ ಸುದ್ದಿ

ಅಮರಾವತಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಹೆಂಗಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಈಗ ಅದೇ ರೀತಿ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಇದೇ ಆ.15ರಿಂದ ಜಾರಿಗೊಳಿಸಲು ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧರಿಸಿದೆ.

2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು ಸರ್ಕಾರ ಇದೇ ಆ.15ರಿಂದ ಸ್ತ್ರೀ ಶಕ್ತಿ ಯೋಜನೆ ಆರಂಭಿಸಲಿದ್ದು, ಈ ಯೋಜನೆಯಡಿ ಎಲ್ಲ ಹೆಣ್ಣುಮಕ್ಕಳು, ಮಂಗಳಮುಖಿಯರು ಉಚಿತ ಬಸ್ ಪ್ರಯಾಣ ಮಾಡಬಹುದು. ಆಂಧ್ರದಲ್ಲಿ ವಾಸಿಸುವ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದಾಗಿದೆ.

ಇನ್ನು ಈ ಕುರಿತು ರಾಜ್ಯ ಸಾರಿಗೆ, ರಸ್ತೆಗಳು ಮತ್ತು ಕಟ್ಟಡಗಳು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾಂತಿಲಾಲ್ ದಂಡೆ ಸೋಮವಾರ (ಆ.11) ಮಾಹಿತಿ ನೀಡಿದ್ದು, ಈ ಯೋಜನೆ ರಾಜ್ಯಾದ್ಯಂತ ಆ.15ರಿಂದ ಜಾರಿಗೆ ಬರಲಿದ್ದು, ಎಪಿಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳಿಗೆ ಹೆಂಗಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.

ಎಸಿ ಸೇರಿ ವಿವಿಧ ಐಷಾರಾಮಿ ಬಸ್‌ಗಳಿಗೆ ಈ ಉಚಿತ ಪ್ರಯಾಣ ಅನ್ವಯ ಆಗುವುದಿಲ್ಲ ಎಂದು ತಿಳಿಸಿರುವ ಅವರು, ಇನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ಜತೆಗೆ ಬಸ್ ಸಿಬ್ಬಂದಿಯು ತಮ್ಮ ಬಟ್ಟೆಯ ಮೇಲೆ ಹಾಕಿಕೊಳ್ಳಬಹುದಾದಂತಹ ಕ್ಯಾಮೆರಾವನ್ನು ಅಳವಡಿಸಲು ಯೋಚಿಸಿದೆ. ಅದಲ್ಲದೇ ಬಸ್ ನಿಲ್ದಾಣಗಳಲ್ಲಿ ಫ್ಯಾನ್, ಕುರ್ಚಿ, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ವಾರ್ಷಿಕವಾಗಿ 1,942 ಕೋಟಿ ರೂ. ಹಾಗೂ ತಿಂಗಳಿಗೆ ಸುಮಾರು 162 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಈ ಸೌಲಭ್ಯವನ್ನು ಅಗತ್ಯವಿದ್ದಾಗ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!