NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ: 2035ರವರೆಗೆ ಎಸ್ಮಾ ವಿಸ್ತರಣೆ – ಚರ್ಚೆ ಇಲ್ಲದೇ ಸದನದಲ್ಲಿ ವಿಧೇಯಕ ಅಂಗೀಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಸ್ಮಾ ಕಾಯ್ದೆ 10 ವರ್ಷಗಳ ಅವಧಿಗೆ ವಿಸ್ತರಣೆಯಾಗುವ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ 2025 ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ 2025 ಅನ್ನು ಸದನದ ಪರ್ಯಾಲೋಚನೆಗೆ ಮಂಡಿಸಿದ ಅವರು, ಈ ಕಾಯ್ದೆಗೆ ಹೊಸ ತಿದ್ದುಪಡಿಯನ್ನು ಸೇರ್ಪಡೆ ಮಾಡುವ ಮೂಲಕ ಎಸ್ಮಾ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

2015ರಿಂದ  ಎಸ್ಮಾ ಜಾರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಈ ನಾಲ್ಕೂ ನಿಗಮಗಳ ನೌಕರರು ಮುಷ್ಕರ ಮಾಡುವಂತಿಲ್ಲ ಎಂಬುದನ್ನು 2015ರಲ್ಲಿ ಎಸ್ಮಾ ಹೇರುವ ಮೂಲಕ ನಿರ್ಬಂಧಿಸಲಾಗಿತ್ತು. ಆಗಲೂ ರಾಮಲಿಂಗಾರೆಡ್ಡಿ ಅವರೇ ಸಾರಿಗೆ ಸಚಿವರಾಗಿದ್ದರು.

ಆಗ ಹತ್ತು ವರ್ಷಗಳ ಅವಧಿಗೆ ಹೇರಲಾಗಿದ್ದ ಎಸ್ಮಾ ನಿಯಮಗಳನ್ನು 2021ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಬಳಸಿತ್ತು. ಇದನ್ನು ಹೊರತುಪಡಿಸಿದರೆ ಎಸ್ಮಾ ಬಳಕೆ ಆಗಿಲ್ಲ. 2025ರ ಮೇ ತಿಂಗಳಲ್ಲಿ ಎಸ್ಮಾ ಅವಧಿ ಮುಗಿದಿತ್ತು. ಆದ್ದರಿಂದ ಇದನ್ನು ಇನ್ನೂ ಮುಂದಿನ 10 ವರ್ಷಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ಅತ್ಯಾವಶ್ಯಕ ಕಾಯ್ದೆ ತಿದ್ದುಪಡಿಗೆ ಸಚಿವ ರಾಮಲಿಂಗಾರೆಡ್ಡಿ ಕೋರಿದರು.

ಈ ವೇಳೆ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಮಾತನಾಡಿ, ಎಸ್ಮಾ ಜಾರಿ ಮಾಡಿ ಸಾರಿಗೆ ಸಂಸ್ಥೆಗಳ ನೌಕರರನ್ನು ಮುಷ್ಕರ ಮಾಡದಂತೆ ಹತ್ತಿಕ್ಕುವುದು ಒಂದು ಕಡೆಯಾದರೆ, ನೌಕರರು ಹಾಗೂ ಅಧಿಕಾರಿಗಳಿಗೆ ತಮ್ಮ ದೂರುಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ ಕಲ್ಪಿಸಿ ಎಂದು ಹೇಳಿದರು.

ಮುಖ್ಯಮಂತ್ರಿಗಳ ಜೊತೆ ನಾಲ್ಕು ಬಾರಿ ಸಾರಿಗೆ ನಿಗಮಗಳ 13 ಸಂಘಟನೆಗಳು ಚರ್ಚೆ ನಡೆಸಿವೆ. 1996 ರಿಂದಲೂ ನಿಗಮಗಳ ಸಂಘಟನೆಗಳಿಗೆ ಚುನಾವಣೆ ನಡೆದಿಲ್ಲ, ಒಟ್ಟು 13 ಸಂಘಟನೆಗಳಿವೆ. ಚುನಾವಣೆ ನಡೆಸುವ ಅಗತ್ಯ ಇದೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ನಂತರ ಸದನ ಯಾವುದೇ ಚರ್ಚೆ ಇಲ್ಲದೇ ವಿಧೇಯಕವನ್ನು ಅಂಗೀಕರಿಸಿತು. ಆದರೆ, ಇದು ಜೂನ್‌ 2025ರಿಂದ ಮುಂದಿನ 10 ವರ್ಷಗಳ ಕಾಲ ಮಾತ್ರ ಕಾಯ್ದೆಗೆ ಜೀವವಿರುತ್ತದೆ. ಅಂದರೆ 2035 ಮೇ ತಿಂಗಳಿನಲ್ಲಿ ಈ ಕಾಯ್ದೆ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ.

Megha
the authorMegha

Leave a Reply

error: Content is protected !!