ಆ.28ರಂದು ಕನಿಷ್ಠ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ EPS ಪಿಂಚಣಿದಾರರ ಬೃಹತ್ ಪ್ರತಿಭಟನೆ


ಬೆಂಗಳೂರು: ಕೇಂದ್ರ ಸರ್ಕಾರ ಮುಸ್ಸಂಜೆಯ ಇಳಿವಯಸ್ಸಿನಲ್ಲಿರುವ ಪ್ರಬುದ್ಧ ಇಪಿಎಸ್-95 ನಿವೃತ್ತರು ಕಳೆದೊಂದು ದಶಕದಿಂದ ದೇಶಾದ್ಯಂತ ನಡೆಸಿದ ಹೋರಾಟಕ್ಕೆ ಯಾವುದೇ ಪ್ರತಿಫಲ ಕೊಡದೆ ಉದ್ಧಟತನದಿಂದ ನಡೆದುಕೊಳ್ಳುತ್ತಿರುವುದಕ್ಕೆ ಸಮಸ್ತ ನಿವೃತ್ತರು ತೀವ್ರ ಬೇಸರಗೊಂಡಿದ್ದಾರೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ನಮ್ಮ ನೇತಾರರಾದ ಕಮಾಂಡರ್ ಅಶೋಕ್ ರಾಹುತ್ ಅವರು ಪಾರ್ಲಿಮೆಂಟ್ ಮುಂಗಾರು ಅಧಿವೇಶನದ ಹೊತ್ತಿನಲ್ಲಿ, ಇದೇ ಆಗಸ್ಟ್ 04, 05, 2025 ರಂದು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಈ ಪ್ರತಿಭಟನೆಗೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಇಪಿಎಸ್ ನಿವೃತ್ತರ ಜತೆಗೋಡಿ ನಡೆಸಿದ ಹೋರಾಟ ಮನ ಕಲಕುವಂತಿತ್ತು. ಇನ್ನು ಇದೇ ಆಗಸ್ಟ್ 15, 2025 ರಂದು ಪ್ರಧಾನಿ ದೆಹಲಿಯ ಕೆಂಪುಕೋಟೆ ಮೇಲೆ, 79ನೇ ಸ್ವತಂತ್ರೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ, ನಮ್ಮ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಗಳ ಬಗ್ಗೆ ಸಿಹಿ ಸುದ್ದಿ ನೀಡುತ್ತಾರೆ ಎಂಬ ಭರವಸೆ ಕೂಡ ಸುಳ್ಳಾಯಿತು.
ಮುಂಗಾರು ಪಾರ್ಲಿಮೆಂಟ್ ಅಧಿವೇಶನದಲ್ಲಿ, ನಮ್ಮ ರಾಜ್ಯದವರೇ ಆದ ಶೋಭಾ ಕರಂದ್ಲಾಜೆ ಅವರು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಪಿಎಸ್ ನಿವೃತ್ತರ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿರುವುದು ನಿವೃತ್ತರನ್ನು ಮತ್ತಷ್ಟು ನಿರಾಸೆಗೊಳಿಸಿದೆ.
ಇದಕ್ಕೆ ನಿರ್ದಯಿ ಇಪಿಎಫ್ಓ ಅಧಿಕಾರಿಗಳು ಇಷ್ಟಕ್ಕೆಲ್ಲಾ ಕಾರಣರಾಗಿದ್ದು, ಇಪಿಎಸ್ ನಿವೃತ್ತರ ಹೋರಾಟವನ್ನು ಎಂದೆಂದಿಗಿಂತಲೂ ಇನ್ನು ಮುಂದೆ ತೀವ್ರಗೊಳಿಸುವುದು ಅನಿವಾರ್ಯವಾಗಿದೆ. ನಮ್ಮ ಹೋರಾಟದಲ್ಲಿ ಕೆಲವೊಂದು ವಿನೂತನ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ಆಗಸ್ಟ್ 28ರ ಗುರುವಾರ ನಗರದ ರಿಚ್ ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಛೇರಿ ಆವರಣದಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಪಿಎಸ್ ನಿವೃತ್ತರು 29ನೇ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಹೋರಾಟ ಕನಿಷ್ಠ ಹೆಚ್ಚುವರಿ ಪಿಂಚಣಿ ಹಾಗೂ ಹೈಯರ್ ಪಿಂಚಣಿ (ನ್ಯಾಯಾಲಯದ ತೀರ್ಪಿನ ಪ್ರಕಾರ) ಎರಡೂ ಅಂಶಗಳು ಈಡೇರಿರುವವರೆಗೂ ಈ ನಿಲ್ಲದು ಎಂದು ಹೇಳಿದರು.

ಇನ್ನು ಈ ದೆಶೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸುವುದು ಅವಶ್ಯಕವಾಗಿದೆ. ನಮ್ಮ ಹೋರಾಟದ ಸಂದೇಶ ದೆಹಲಿ ತಲುಪಬೇಕು. ಈ ದೃಷ್ಟಿಯಿಂದ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಇಪಿಎಸ್ ನಿವೃತ್ತರ ಹಮ್ಮಿಕೊಂಡಿರುವ ಈ ಪ್ರತಿಭಟನೆಯಲ್ಲಿ ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಮ್ ಸ್ವಾಮಿ, ಇತರೆ ಮುಖಂಡರು ಹಾಗೂ ನಮ್ಮ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಲಿದ್ದು, ಮುಖಂಡರು ಪ್ರಚಲಿತ ಸಂಗತಿ ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆ ಬಗ್ಗೆಯೂ ಪ್ರಸ್ತುತಪಡಿಸಲಿದ್ದಾರೆ.
ಹೀಗಾಗಿ ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ ಆ.28ರ ಗುರುವಾರ ಬೆಳಗ್ಗೆ 10:30ಕ್ಕೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಈ ಬೃಹತ್ ಪ್ರತಿಭಟನೆಯಲ್ಲಿ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ಮನವಿ ಮಾಡಿದ್ದಾರೆ.
Related
