CRIMENEWSನಮ್ಮರಾಜ್ಯ

KKRTC: ಲಾರಿಗೆ ಡಿಕ್ಕಿ ಹೊಡೆಯುವುದ ತಪ್ಪಿಸಲು ಹೋಗಿ ರಸ್ತೆಬದಿ ಕಂದಕಕ್ಕೆ ನುಗ್ಗಿದ ಬಸ್‌- ತಪ್ಪಿದ ಭಾರಿ ಅನಾಹುತ

ವಿಜಯಪಥ ಸಮಗ್ರ ಸುದ್ದಿ
  • ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಪಾಲಿಸದ ಬೀದರ್‌ ಘಟಕ-1ರ  ಡಿಎಂ

ಬೀದರ್‌: ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ ರಸ್ತೆಬದಿ ಕಂದಕಕ್ಕೆ ನುಗ್ಗಿರುವ ಘಟನೆ ಕರ್ನೂಲ್ ಬಳಿ ತಡರಾತ್ರಿ ಜರುಗಿದೆ.

ಬಸ್‌ ಬೀದರ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಮಧ್ಯರಾತ್ರಿ ಸುಮಾರು1.30ರ ಸಮಯದಲ್ಲಿ ಕರ್ನೂಲ್ ಬಳಿ ಏಕಾಏಕಿ ಹಠಾತ್ತನೇ ಲಾರಿ ಎದುರಿಗೆ ಬಂದಿದೆ. ಈ ವೇಳೆ ಬಸ್‌ ಚಾಲಕರು ಅಪಘಾತ ತಪ್ಪಿಸಲು ಪ್ರಯತ್ನಿಸಿದಾಗ ಬಸ್ ರಸ್ತೆ ಪಕ್ಕದ ಕಂದಕಕ್ಕೆ ಇಳಿದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ.

ಕೆಕೆಆರ್‌ಟಿಸಿ ಸಂಸ್ಥೆಯ ಬೀದರ್‌ ವಿಭಾಗದ ಬೀದರ್‌ ಘಟಕ -1ರ ಬಸ್‌ ಇದಾಗಿದ್ದು, ನಿನ್ನೆ (ಆ.26) ತಡರಾತ್ರಿ ಬೀದರ್‌ನಿಂದ ಬೆಂಗಳೂರಿಗೆ ಹೊರಟಿದ್ದು, ಬಸ್‌ ಚಾಲಕ ನಾಗೇಶ (213) ಹಾಗೂ ನಿರ್ವಾಹಕ ಸಿದ್ದಲಿಂಗ (127) ಅವರು ಡ್ಯೂಟಿ ಮೇಲೆ ಇದ್ದರು.

ಸುಮಾರು 16 ಜನ ಪ್ರಯಾಣಿಕರಿದ್ದು ಎಲ್ಲರೂ ಬಹುತೇಕ ಮಲಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಚಾಲಕ ನಾಗೇಶ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

ವಿಭಾಗೀಯ ನಿಯಂತ್ರಣಾಧಿಕಾರಿಗಳ ಆದೇಶ ಪಾಲಿಸದ ಡಿಎಂ: ಕೆಕೆಆರ್‌ಟಿಸಿ ಸಂಸ್ಥೆಯ ಬೀದರ್‌ ವಿಭಾಗದ ಬೀದರ್‌ ಘಟಕ -1ರ ಘಟಕ ವ್ಯವಸ್ಥಾಪಕರು ವಿಭಾಗೀಯ ನಿಯಂತ್ರಣಾಧಿಕಾರಿ ಹೊರಡಿಸಿರುವ 480ಕಿಮೀಗೆ ಇಬ್ಬರು ಚಾಲಕರು ಒಬ್ಬ ನಿರ್ವಾಹಕರನ್ನು ಹಾಕಬೇಕು ಎಂದು ಆದೇಶವನ್ನು ಗಾಳಿಗೆ ತೂರಿದ್ದು, ಸುಮಾರು 1500 KM ಕಾರ್ಯಾಚರಣೆಗೆ ಒಬ್ಬರೇ ಚಾಲಕ ಹಾಗೂ ಇನ್ನೋರ್ವ ಚಾಲಕ ಕಂ ನಿರ್ವಾಹಕರನ್ನಷ್ಟೇ ಡ್ಯೂಟಿ ಮೇಲೆ ಕಳುಹಿಸುತ್ತಿದ್ದಾರೆ.

Advertisement

ಇದರಿಂದ ಕಾರ್ಯಾಚರಣೆ ವೇಳೆ ಈ ಸಮಸ್ಯೆಯಾಗುತ್ತಿದ್ದು ಇಂಥ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ ಎಂದು ಘಟಕದ ನೌಕರರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೊರಡಿಸಿರುವ ಆದೇಶ ದಾಖಲೆಯೊಂದಿಗೆ ಆರೋಪ ಮಾಡುತ್ತಿದ್ದಾರೆ.

ಡಿಸಿ ಆದೇಶದಲ್ಲೇನಿದೆ?: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ್‌ ವಿಭಾಗದ ಬೀದರ-1, ಬೀದರ-2, ಹುಮನಾಬಾದ, ಬಸವಕಲ್ಯಾಣ, ಭಾಲ್ಕಿ ಮತ್ತು ಔರಾದ ಘಟಕದ ಘಟಕ ವ್ಯವಸ್ಥಾಪಕರು 480 ಕಿ.ಮೀ.ಕ್ಕಿಂತ ಹೆಚ್ಚಿನ ಅನುಸೂಚಿ ಕಿ.ಮೀ. ಇರುವ ಮಾರ್ಗಗಳಿಗೆ ಇಬ್ಬರು ಚಾಲಕರನ್ನು ನಿಯೋಜಿಸಬೇಕು ಎಂದು ಕಳೆದ 2024ರ ಆಗಸ್ಟ್‌ 16ರಂದೇ ಆದೇಶ ಹೊರಡಿಸಿದ್ದಾರೆ.

ತಮಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಿಳಿಯಪಡಿಸುವುದೇನೆಂದರೆ 480 ಕ್ಕಿಂತ ಹೆಚ್ಚಿನ ಅನುಸೂಚಿ ಕಿ.ಮೀ. ಇರುವ ವೇಗದೂತ ಬಸ್‌ಗಳಿಗೆ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವಾಗ ಇಬ್ಬರು ಚಾಲಕರು ಮತ್ತು ಒಬ್ಬ ನಿರ್ವಾಹಕರನ್ನು ನಿಯೋಜಿಸಿ ಕಾರ್ಯಚರಣೆ ಅನುಸೂಚಿಗಳಿಗೆ ಚಾಲನೆ ಮಾಡಬೇಕು. ಆದ್ದರಿಂದ ತಮ್ಮ ಘಟಕಗಳಲ್ಲಿ 480 ಕ್ಕಿಂತ ಹೆಚ್ಚಿನ ಅನುಸೂಚಿ ಕಿ.ಮೀ. ಇರುವ ವೇಗದೂತ ಅನುಸೂಚಿಗಳಿಗೆ ಕೇಂದ್ರ ಕಚೇರಿಯ ನಿರ್ದೇಶನದಂತೆ ಇಬ್ಬರು ಚಾಲಕರು ಮತ್ತು ಒಬ್ಬ ನಿರ್ವಾಹಕರನ್ನು ನಿಯೋಜಿಸಿ ಕಾರ್ಯಚರಣೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಆದರೆ ಈ ಆದೇಶವನ್ನು ವಿಭಾಗದ ಘಟಕ ವ್ಯವಸ್ಥಾಪಕರು ಪಾಲನೆ ಮಾಡದೆ ಬೀದರ್‌ನಿಂದ ಬೆಂಗಳೂರಿಗೆ ಅಂದರೆ ಸುಮಾರು 1500 KM ಕಾರ್ಯಾಚರಣೆಗೆ ಒಬ್ಬರೇ ಚಾಲಕ ಹಾಗೂ ಇನ್ನೋರ್ವ ಚಾಲಕ ಕಂ ನಿರ್ವಾಹಕರನ್ನಷ್ಟೇ ಡ್ಯೂಟಿ ಮೇಲೆ ಕಳುಹಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

ವಿಜಯಪಥ - vijayapatha
Megha
the authorMegha

Leave a Reply

error: Content is protected !!