NEWSನಮ್ಮಜಿಲ್ಲೆಬೆಂಗಳೂರು

BMTC ಸಂಸ್ಥೆಯಲ್ಲಿ ಪ್ರಸ್ತುತ 27,595 ನೌಕರರಿಗೆ ಹಲವು ಕಲ್ಯಾಣ ಯೋಜನೆಗಳು ಜಾರಿ: ಎಂಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸ್ವತಂತ್ರ ಸಂಸ್ಥೆಯಾಗಿ 27 ವರ್ಷಗಳನ್ನು ಪೂರೈಸಿದ್ದು, ಪ್ರಸ್ತುತ ರಾಷ್ಟ್ರದಲ್ಲಿಯೇ ಒಂದು ಮಾದರಿ ನಗರ ಸಾರಿಗೆ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ ವ್ಯವಸ್ಥಾಪಕ ನಿರ್ದೇಶಕ ಆರ್‌.ರಾಮಚಂದ್ರನ್‌ ತಿಳಿಸಿದ್ದಾರೆ.

ಇನ್ನು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಅಭ್ಯುದಯಕ್ಕಾಗಿ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನೌಕರರ ಕುಟುಂಬದ ಆರ್ಥಿಕ ಭದ್ರತೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅವುಗಳಲ್ಲಿ ‘ವೇತನ ಖಾತೆ ಪ್ಯಾಕೇಜ್’ (Salary Package) ಯೋಜನೆಯಡಿ ಕೆನರಾ/ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ/ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡ ವತಿಯಿಂದ ವಿಮಾ ಯೋಜನೆ ಹೊಂದಲಾಗಿದೆ.

ಸಂಸ್ಥೆಯು ಪ್ರಸ್ತುತ ಈ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಅಧಿಕಾರಿ/ ನೌಕರರಿಗೆ ‘ವೇತನ ಪ್ಯಾಕೇಜ್ ಖಾತೆ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅದರನ್ವಯ ಈ ಬ್ಯಾಂಕುಗಳ ಮೂಲಕ ವೇತನ ಖಾತೆ ಹೊಂದಿರುವ ಸಂಸ್ಥೆಯ ಅಧಿಕಾರಿ/ ನೌಕರರಿಗೆ ಇನ್ನಿತರೆ ಸೌಲಭ್ಯಗಳನ್ನು
ನೀಡಲಾಗುತ್ತಿದೆ.

ಅದರಲ್ಲಿ ಪ್ರಮುಖವಾಗಿ ಅಪಘಾತ/ ಸ್ವಾಭಾವಿಕ ಮರಣ ಪ್ರಕರಣಗಳಲ್ಲಿ ನಾಮನಿರ್ದೇಶಿತರಿಗೆ ನೀಡುತ್ತಿರುವ ಸೌಲಭ್ಯಗಳು ಕೆನರಾ ಬ್ಯಾಂಕ್‌ನಲ್ಲಿ ಸ್ವಾಭಾವಿಕ ಮರಣ ಪ್ರಕರಣಗಳಿಗೆ ವಿಮಾ ಪರಿಹಾರ ಮೊತ್ತ ಅಧಿಕಾರಿ/ ನೌಕರರ ನಾಮನಿರ್ದೇಶಿತರಿಗೆ ಅವರ ವೇತನದ ಆಧಾರದ ಮೇರೆಗೆ 1ಲಕ್ಷದಿಂದ ₹6 ಲಕ್ಷ ವರೆಗೆ ಕೊಡಲಾಗುತ್ತಿದೆ. ಅದರಂತೆ ಅಪಘಾತದಲ್ಲಿ ಮರಣ ಸಂಭವಿಸಿದರೆ 1 ಕೋಟಿ ರೂ.ಗಳನ್ನು ಕೊಡಲಾಗುತ್ತಿದೆ.

ಬ್ಯಾಂಕ್ ಆಫ್ ಬರೋಡದಲ್ಲಿ ಸ್ವಾಭಾವಿಕ ಮರಣ ಪ್ರಕರಣಗಳಿಗೆ ವಿಮಾ ಪರಿಹಾರ ಮೊತ್ತ ಅಧಿಕಾರಿ/ ನೌಕರರ ನಾಮನಿರ್ದೇಶಿತರಿಗೆ ಅವರ ವೇತನದ ಆಧಾರದ ಮೇರೆಗೆ ₹10 ಲಕ್ಷ ವರೆಗೆ ಕೊಡಲಾಗುತ್ತಿದೆ. ಅದರಂತೆ ಅಪಘಾತದಲ್ಲಿ ಮರಣ ಸಂಭವಿಸಿದರೆ 1 ಕೋಟಿ ರೂ.ಗಳನ್ನು ಕೊಡಲಾಗುತ್ತಿದೆ.

ಅಧಿಕಾರಿ/ನೌಕರರ ನಾಮನಿರ್ದೇಶಿತರಿಗೆ 10 ರೂ.ಗಳನ್ನು ಅಪಘಾತ ಮರಣ ಪ್ರಕರಣಗಳಲ್ಲಿ ವಿಮಾ ಪರಿಹಾರ 1ಕೋಟಿ ರೂ.ಗಳನ್ನು ಹಾಗೂ ಕರ್ತವ್ಯ ನಿರತ ವೇಳೆ ಅಪಘಾತದಿಂದ ಮೃತಪಟ್ಟಲ್ಲಿ ನಾಮನಿರ್ದೇಶಿತರಿಗೆ ₹1.25 ಕೋಟಿ ಕೊಡಲಾಗುತ್ತದೆ.

Advertisement

ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ವಾಭಾವಿಕ ಮರಣ ಪ್ರಕರಣಗಳಿಗೆ ವಿಮಾ ಪರಿಹಾರ ಮೊತ್ತ ಅಧಿಕಾರಿ/ ನೌಕರರ ನಾಮನಿರ್ದೇಶಿತರಿಗೆ ಅವರ ವೇತನದ ಆಧಾರದ ಮೇರೆಗೆ ₹6 ಲಕ್ಷ ಕೊಡಲಾಗುತ್ತಿದೆ. ಅದರಂತೆ ಅಪಘಾತದಲ್ಲಿ ಮರಣ ಸಂಭವಿಸಿದರೆ 50 ಲಕ್ಷ ರೂ.ಗಳನ್ನು ಕೊಡಲಾಗುತ್ತಿದೆ. (6 ಲಕ್ಷ ವಿಮಾ ಪರಿಹಾರ ಮೊತ್ತ ಪಾವತಿಸುವ ಕುರಿತು ಒಡಂಬಡಿಕೆ ಪ್ರಗತಿಯಲ್ಲಿದೆ.)

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ (10 ಲಕ್ಷ ವಿಮಾ ಪರಿಹಾರ ಮೊತ್ತ ಪಾವತಿಸುವ ಕುರಿತು ಒಡಂಬಡಿಕೆ ಪ್ರಗತಿಯಲ್ಲಿದೆ) ಅಪಘಾತದಲ್ಲಿ ಮರಣ ಸಂಭವಿಸಿದರೆ ಅಧಿಕಾರಿ/ ನೌಕರರ ನಾಮನಿರ್ದೇಶಿತರಿಗೆ 50 ಲಕ್ಷ ರೂ. ಕೊಡಲಾಗುತ್ತದೆ.

ಸಂಸ್ಥೆಯಲ್ಲಿ ಪ್ರಸ್ತುತ 27,595 ಅಧಿಕಾರಿ/ನೌಕರರುಗಳು ಈ 4 ಬ್ಯಾಂಕ್‌ಗಳಲ್ಲಿ ವೇತನ ಖಾತೆಯನ್ನು ಹೊಂದಿದ್ದು, ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಉಳಿದಂತೆ, ಈ 4 ಬ್ಯಾಂಕುಗಳನ್ನು ಹೊರತುಪಡಿಸಿ ಇನ್ನಿತರೆ ಬ್ಯಾಂಕ್‌ಗಳಲ್ಲಿ 1,716 ನೌಕರರು ವೇತನ ಖಾತೆಯನ್ನು ಹೊಂದಿದ್ದು, ಇನ್ನಿತರೆ ಬ್ಯಾಂಕ್‌ಗಳು ಒಡಂಬಡಿಕೆ ಮಾಡಿಕೊಳ್ಳದೆ ಇರುವುದರಿಂದ ಈ ನೌಕರರು ಈ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ದರಿಂದ ಸದರಿ ನೌಕರರು ಈ 4 ಬ್ಯಾಂಕ್‌ಗಳಲ್ಲಿ ತಾವು ಇಚ್ಚಿಸಿದ ಯಾವುದೇ ಒಂದು ಬ್ಯಾಂಕಿನಲ್ಲಿ ವೇತನ ಖಾತೆಯನ್ನು ತೆರೆಯುವುದರ ಮೂಲಕ ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟು ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ: (PMJJBY) ಈ ಯೋಜನೆಯು ಯಾವುದೇ ಕಾರಣದಿಂದ ವ್ಯಕ್ತಿಯ ಮರಣ ಸಂಭವಿಸಿದರೆ, ಅವರ ನಾಮನಿರ್ದೇಶಿತರಿಗೆ 2 ಲಕ್ಷ ರೂ.ಗಳ ಜೀವ ವಿಮಾ ಪರಿಹಾರವನ್ನು ಒದಗಿಸುತ್ತದೆ. ಇದು ಒಂದು ವಾರ್ಷಿಕ ಜೀವ ವಿಮೆ ಯೋಜನೆಯಾಗಿದ್ದು, 18 ರಿಂದ 50 ವರ್ಷ ವಯಸ್ಸಿನ ಯಾವುದೇ ಉಳಿತಾಯ ಬ್ಯಾಂಕ್ ಖಾತೆದಾರರು ವಾರ್ಷಿಕ ರೂ.436/-ಗಳ ಪ್ರೀಮಿಯಂನೊಂದಿಗೆ ನೊಂದಾಯಿಸಿ ಕೊಳ್ಳಬಹುದಾಗಿದೆ.

PMJJBY ಜೀವ ವಿಮಾ ಹೊಂದಿಲ್ಲದವರು ಒಪ್ಪಿಗೆ ಫಾರಂ ಅನ್ನು ತಾವು ವೇತನ ಖಾತೆ ಹೊಂದಿರುವ ಬ್ಯಾಂಕಿಗೆ ತಾವುಗಳೆ ನೇರವಾಗಿ ಸಲ್ಲಿಸುವ ಮೂಲಕ ಯೋಜನೆಯಲ್ಲಿ ಸೇರಬಹುದಾಗಿದೆ. ಪ್ರೀಮಿಯಂ ಮೊತ್ತವು ಉಳಿತಾಯ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತ ಆಗುತ್ತದೆ.

ಪ್ರಧಾನ ಮಂತ್ರಿ ಸುರಕ ಬಿಮಾ ಯೋಜನೆ: (PMSBY) ಈ ಯೋಜನೆಯು ಅಪಘಾತದಿಂದ ಉಂಟಾಗುವ ಮರಣ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ 2 ಲಕ್ಷ ರೂ.ಗಳ ಜೀವ ವಿಮಾ ರಕ್ಷಣೆಯನ್ನು ಪಡೆಯಬಹುದು. ಇದು ಒಂದು ವಾರ್ಷಿಕ ವಿಮಾ ಯೋಜನೆಯಾಗಿದ್ದು, 18 ರಿಂದ 70 ವರ್ಷ ವಯಸ್ಸಿನ ಯಾವುದೇ ಉಳಿತಾಯ ಬ್ಯಾಂಕ್ ಖಾತೆದಾರರು ವಾರ್ಷಿಕ 20 ರೂ. ಗಳ ಪ್ರೀಮಿಯಂನೊಂದಿಗೆ ನೊಂದಾಯಿಸಿಕೊಳ್ಳಬಹುದು.

ಹೀಗಾಗಿ ಒಪ್ಪಿಗೆ ಫಾರಂ ಅನ್ನು ತಾವು ವೇತನ ಖಾತೆ ಹೊಂದಿರುವ ಬ್ಯಾಂಕಿಗೆ ತಾವುಗಳೆ ನೇರವಾಗಿ ಸಲ್ಲಿಸುವ ಮೂಲಕ ಯೋಜನೆಯಲ್ಲಿ ಸೇರಬಹುದಾಗಿದೆ. ಪ್ರೀಮಿಯಂ ಮೊತ್ತವು ಉಳಿತಾಯ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತ ಆಗುತ್ತದೆ.

ಹೀಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ/ ನೌಕರರು ಈ ‘ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ’ (PMJJBY) ಹಾಗೂ ‘ಪ್ರಧಾನ ಮಂತ್ರಿ ಸುರಕ್ಷ ಬಿಮಾ ಯೋಜನೆ’ (PMSBY) ಯೋಜನೆಗಳ ವ್ಯಾಪ್ತಿಗೆ ಒಳಪಡಲು ಒಪ್ಪಿಗೆ ಫಾರಂ ಅನ್ನು ವೇತನ ಖಾತೆ ಹೊಂದಿರುವ ಬ್ಯಾಂಕುಗಳಿಗೆ ಸಲ್ಲಿಸಿ
ಈ ಯೋಜನೆಗಳ ಸೌಲಭ್ಯಗಳನ್ನು ಪಡೆಯಿರಿ ಎಂದು ಎಲ್ಲರಿಗೂ ಎಂಡಿ ಸೂಚಿಸಿದ್ದಾರೆ.

ವಿಜಯಪಥ - vijayapatha
Megha
the authorMegha

Leave a Reply

error: Content is protected !!