ಬೆಂಗಳೂರು: ತನ್ನ ಲಿವ್ ಇನ್ ಗೆಳತಿ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ವ್ಯಕ್ತಪಡಿಸಿ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಸುಟ್ಟುಹಾಕಿರುವ ಘಟನೆ ನಗರದ ಹೊರವಲಯದ ಹುಳಿಮಾವು ಬಳಿ ನಡೆದಿದೆ.
ವನಜಾಕ್ಷಿ (26) ಮೃತ ಮಹಿಳೆ. ಆರೋಪಿ ಲಿವ್ ಇನ್ ಗೆಳೆಯ ವಿಠ್ಠಲ (52) ಹತ್ಯೆ ಮಾಡಿದವ. ಕ್ಯಾಬ್ ಚಾಲಕನಾಗಿದ್ದ ಈತ ಮಳೆನಲ್ಲಸಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ವನಜಾಕ್ಷಿ ಜತೆ ಲಿವಿಂಗ್ ಟುಗೆದರ್‌ನಲ್ಲಿದ್ದ.
ಆದರೆ ಇತ್ತೀಚೆಗೆ ವನಜಾಕ್ಷಿ ಬೇರೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ವಿಠ್ಠಲ ಅನುಮಾನಗೊಂಡು ಆಕೆಯನ್ನು ಫಾಲೋ ಮಾಡಲು ಶುರು ಮಾಡಿದ್ದ. ಇದೇ ಸಮಯದಲ್ಲಿ ವನಜಾಕ್ಷಿ ಬೇರೊಬ್ಬ ವ್ಯಕ್ತಿಯ ಜೊತೆಗೆ ಕಾರಿನಲ್ಲಿ ಹೋಗುತ್ತಿರುವುದನ್ನು ಕಂಡು ಕೋಪಗೊಂಡಿದ್ದ.
ಅಲ್ಲದೆ ಆಕೆ ಹೋಗುತ್ತಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಆರೋಪಿ ತನ್ನ ಕಾರಿನಲ್ಲಿದ್ದ 5 ಲೀಟರ್ ಪೆಟ್ರೋಲ್ ತೆಗೆದು ಬಂದು ವನಜಾಕ್ಷಿ ಮೇಲೆ ಸುರಿಯಲು ಮುಂದಾದ ಈ ವೇಳೆ ಭಯಭೀತಳಾದ ವನಜಾಕ್ಷಿ ಕಾರಿನಿಂದ ಇಳಿದು ಅಲ್ಲಿಂದ ಓಡಿಹೋಗಿದ್ದಾಳೆ. ಆದರೂ ಬಿಡದೆ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದರಿಂದ ಆಕೆ ತೀವ್ರವಾಗಿ ಸುಟ್ಟು ಗಾಯಗಳಿಂದ ಒದ್ದಾಡುತ್ತಿದ್ದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು (ಸೆ.1) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಈ ಘಟನೆ ಸಂಬಂಧ ಹುಳಿಮಾವು ಪೊಲೀಸರು ಆರೋಪಿ ವಿಠ್ಠಲನನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

Related

 










