ಬೆಂಗಳೂರು: ನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ಸೊಂದು ಡಿಕ್ಕಿಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಶಂಕರ್ ನಾರಾಯಣ್ (76) ಮೃತ ವೃದ್ಧರು. ಓ ಫಾರ್ಮ್ ಕಡೆಯಿಂದ ಚನ್ನಸಂದ್ರ ಕಡೆಗೆ ಭಾನುವಾರ ರಾತ್ರಿ ಸುಮಾರು 8.30ರಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ ರಸ್ತೆ ದಾಟುತ್ತಿದ್ದ ವೃದ್ಧ ಶಂಕರ್ ನಾರಾಯಣ್ ಅವರಿಗೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶಂಕರ್ ನಾರಾಯಣ್ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಬಿಎಂಟಿಸಿ ಬಸ್ ಡ್ರೈವರ್ ಗಂಗರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಬಿಎಂಟಿಸಿ ಬಸ್‌ಗಳಿಂದ ಇತ್ತೀಚೆಗೆ ಆದ ಅಪಘಾತಗಳು: ರಾಜ್ಯದ ರಾಜಧಾನಿಯ ಕೆ.ಆರ್.ಮಾರುಕಟ್ಟೆ ಬಿಎಂಟಿಸಿ ಬಸ್ ಹರಿದು ಶಬರೀಶ್ (11) ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ. ಇನ್ನು 10 ವರ್ಷದ ಬಾಲಕಿಯ ತಲೆ ಮೇಲೆ ಬಸ್ ಹರಿದು ಆಕೆ ಸ್ಥಳದಲ್ಲೇ ಅಸುನೀಗಿದ್ದ ಘಟನೆ ಯಲಹಂಕ ಕೋಗಿಲು ಕ್ರಾಸ್ ಬಳಿ ನಡೆದಿತ್ತು.

ಜಯನಗರದ 4ನೇ ಬ್ಲಾಕ್‌ನಲ್ಲಿ ಬಿಎಂಟಿಸಿ ಬಸ್ ಹರಿದ ಪರಿಣಾಮ ವೃದ್ಧ ಸಂಪಂಗಿ ಎಂಬುವರೂ ಕೂಡ ಸ್ಥಳದಲ್ಲೇ ಪ್ರಾಣಬಿಟ್ಟರು. ಹೀಗೆ ಒಂದು ತಿಂಗಳಲ್ಲೇ ಒಟ್ಟಾರೆ ಬಿಎಂಟಿಸಿ ಬಸ್ ಅಪಘಾತದಿಂದ 8 ಮಂದಿ ಜೀವ ಕಳೆದುಕೊಂಡಿದ್ದಾರೆ.
Related

 










