ಬೆಂಗಳೂರು: “ನಿಧಿ ಅಪ್ಕೆನಿಕಟ್” ಕಾರ್ಯಕ್ರಮದಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಇಪಿಎಸ್ ಪಿಂಚಣಿದಾರರ 29ನೇ ಬೃಹತ್ ಪ್ರತಿಭಟನಾ ಸಭೆ ಜರುಗಿತು.
ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ, ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ ₹5000 ಕೂಡಲೇ ನೀಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಯೊಂದಿಗೆ ಮನವಿ ಪತ್ರವನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ (minister for labour & employment) ಸಚಿವರಾದ ಮುನ್ಸೂಕ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಈ ದಿನವೇ ಕಳುಹಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸಲ್ಲಿಸಿದರು.
ಸಂಘದ ಖಜಾಂಚಿ ಡೋಲಪ್ಪನವರು ಎಲ್ಲ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಸ್ವಾಗತಿಸುವ ಮೂಲಕ ಸಭೆಗೆ ಚಾಲನೆ ನೀಡಿ ಮಾತನಾಡುತ್ತಾ, ಬಿಎಂಟಿಸಿ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಜಂಟಿ ಆಯ್ಕೆ ಪತ್ರಗಳನ್ನು ಇಪಿಎಫ್ಒ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡು ವಜಾ ಗೊಳಿಸುವ ಮೂಲಕ ಅನ್ಯಾಯವೆಸಗಿದ್ದಾರೆ, ಇದಕ್ಕಾಗಿ ಇಂದು ನಮ್ಮ ಹೋರಾಟ ಎಂದರು.
ಸಂಘದ ಅಧ್ಯಕ್ಷ ನಂಜುಂಡೇಗೌಡ ಮಾತನಾಡುತ್ತಾ, ಕಳೆದ ಪಾರ್ಲಿಮೆಂಟ್ ಮುಂಗಾರು ಅಧಿವೇಶನದಲ್ಲಿ ರಾಜ್ಯದ 28 ಸಂಸದರು ಅಧಿವೇಶನದಲ್ಲಿ ಇಪಿಎಸ್ ನಿವೃತ್ತರ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಮಂಡಿಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿ, “ನಿಧಿ ಆಪ್ಕೆ ನಿಕಟ್” ಕಾರ್ಯಕ್ರಮ ಇದೊಂದು ವ್ಯರ್ಥ ಪ್ರಯತ್ನವಾಗಿದ್ದು, ಈ ಅಧಿಕಾರಿಗಳಿಗೆ ನಿವುೃತ್ತರ ಬಗ್ಗೆ ಯಾವುದೇ ಕಳಜಿ ಇಲ್ಲ ಹೀಗಾಗಿ ಮುಂದಿನ ನಮ್ಮ ಹೋರಾಟ ಏನಿದ್ದರೂ ನಗರದ ಫ್ರೀಡಂ ಪಾರ್ಕ್‌ನಲ್ಲಿ ಎಂದರು.
ಎನ್ಎಸಿ ರಾಜ್ಯಾಧ್ಯಕ್ಷರಾದ ಜಿಎಸ್ಎಂ ಸ್ವಾಮಿ ಮಾತನಾಡಿ, ಕಳೆದೊಂದು ದಶಕದಿಂದ ನಾವೆಲ್ಲರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ಮಾಡಿದ್ದರೂ ಸಹಾ ಇವರವಿಗೂ ಯಾವುದೇ ಪ್ರತಿಫಲ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಂಘದ ಕಾರ್ಯಾಧ್ಯಕ್ಷರ ಶಂಕರ್ ಕುಮಾರ್ ಮಾತನಾಡಿ, ಇಪಿಎಸ್ ನಿವೃತ್ತರು ತೀವ್ರ ಸಂಕಷ್ಟದಲ್ಲಿದ್ದು, ಕಳೆದೊಂದು ದಶಕದಿಂದ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಎನ್ಎಸಿ ಮುಖ್ಯಸ್ಥರಾದ ಕಮಾಂಡರ್ ಅಶೋಕ್ ರಾವತ್ ಅವರ ನೇತೃುತ್ವದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತಿದ್ದರೂ ಸಹ ಇದುವರವಿಗೂ ಯಾವುದೇ ಪ್ರತಿಫಲ ಸಿಗದೇ ಇರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಮಾತನಾಡಿ, ಇಪಿಎಫ್ಒ ಅಧಿಕಾರಿಗಳು, ಇಪಿಎಸ್ ನಿವೃತ್ತರು ಅಧಿಕ ಪಿಂಚಣಿಗೆ ಅರ್ಹರಿದ್ದರೂ ಸಹ, ಸಲ್ಲದ ನಿಯಮಗಳನ್ನು ಸೃಷ್ಟಿಸಿಕೊಂಡು ನಿವೃತ್ತರನ್ನು ನಿರಂತರವಾಗಿ ವಂಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ತಮ್ಮ ತಪ್ಪಿನ ಅರಿವಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪುನಂತೆ ಅಧಿಕ ಪಿಂಚಣಿ ನೀಡಲೇಬೇಕಾಗುತ್ತದೆ ಎಂದರು.
ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಟ್ರಸ್ಟಿನ ಅಧ್ಯಕ್ಷರಾದ ಬ್ರಹ್ಮಚಾರಿ ಮಾತನಾಡಿ, ನಾವು ನಡೆಯುತ್ತಿರುವ ದಾರಿ ಸರಿಯಿಲ್ಲವೇನೋ ಎನಿಸುತ್ತಿದೆ ಎಂದು, ಇಪಿಎಫ್ಓ ಅಧಿಕಾರಿಗಳಿಗೆ ಕಿವಿ ಇಂಡದ ಹೊರತು ಇಪಿಎಸ್ ನಿವೃತ್ತರ ಬೇಡಿಕೆ ಈಡೇರುವುದಿಲ್ಲ ಎಂದು ಸಭೆಯಲ್ಲಿ ಆಕ್ರೋಶಬರಿತರಾಗಿ ಮಾತನಾಡಿದರು. ದೇಶಾದ್ಯಂತ ಇರುವ ಎಲ್ಲ 78 ಲಕ್ಷ ನಿವೃತ್ತರು ಸಂಕಷ್ಟದಲ್ಲಿದ್ದು, ಹಿರಿಯ ಚೇತನಗಳಿಗೆ ಶಕ್ತಿ ತುಂಬಲಿ ಎಂದು ಹಾರೈಸುತ್ತಾ, ಒಟ್ಟಾಗಿ ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಪಿಎಸ್ ನಿವೃತ್ತರು ಭಾಗಿಯಾದಲ್ಲಿ, ನಮಗೆ ಜಯ ಶತಸಿದ್ದ ಎಂದರು.
ಅಂತಿಮವಾಗಿ ಇಪಿಎಫ್ಒ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ, ಇಂದಿನ ಸಭೆಯ ಸಂಪೂರ್ಣ ವಿವರಗಳನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೂ ಹಾಗೂ ದೆಹಲಿಯಲ್ಲಿನ ತಮ್ಮ ಮೇಲಧಿಕಾರಿಗಳಿಗೂ ಕಳಿಸಿ ಕೊಡುವುದಾಗಿ ತಿಳಿಸಿದರು.
ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಟ್ರಸ್ಟ್ ಖಜಾಂಚಿ, ರಮೇಶ್ ಎಂ.ನಾರಾಯಣಸ್ವಾಮಿ ಹಾಗೂ ಡಿ.ವಿ.ನಾರಾಯಣಸ್ವಾಮಿ, ಮನೋಹರ್, ನಾಗರಾಜು, ರುಕ್ಮೆಶ್ ಹಾಗೂ ಕೃಷ್ಣಮೂರ್ತಿ ಇನ್ನೂ ಹಲವಾರು ಮುಖಂಡರು ಇದ್ದರು.
Related

 










