ಬೆಂಗಳೂರು: ಇದೇ 19ರಂದು ನಡೆಯಲಿರುವ ರಾಜ್ಯಸಭೆಗೆ ನಡೆಯುವ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಅಧಿಕೃತ ಉಮೇದುವಾರರಾಗಿ ಖರ್ಗೆ ಅವರು ಕಣಕ್ಕಿಳಿಯಲಿದ್ದಾರೆ. ಖರ್ಗೆ ಅವರ ಹಿರಿತನ ಮತ್ತು ಪಕ್ಷ ನಿಷ್ಠೆ ಹಿನ್ನೆಲೆಯಲ್ಲಿ ಅವರ ಹೆಸರು ಈ ಹಿಂದೆಯೇ ಕೇಳಿಬಂದಿತ್ತು. ಅದರಂತೆ ಪಕ್ಷದ ವರಿಷ್ಠರು ಇಂದು ಅಧಿಕೃತಗೊಳಿಸಿದ್ದಾರೆ.
ಬಿಜೆಪಿಗೆ ಎರಡು ಹಾಗೂ ಕಾಂಗ್ರೆಸ್‌ಗೆ ಒಂದು ಸ್ಥಾಣ ಪಕ್ಕವಾಗಿದ್ದು ಮತ್ತೊಂದು ಸ್ಥಾನ ಯಾರಿಗೆ ಎಂಬ ಲೆಕ್ಕಾಚಾರ ಜೋರಾಗಿದ್ದು, ಕಾಂಗ್ರೆಸ್ ಈಗಾಗಲೇ ಜೆಡಿಎಸ್‌ಗೆ ಅದರಲ್ಲಿಯೂ ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಆದರೆ ಗೌಡರು ಸ್ಪರ್ಧೆ ಬಗ್ಗೆ ಮನಸ್ಸು ಮಾಡಿಲ್ಲ. ಅತ್ತ ಜೆಡಿಎಸ್ ಪಕ್ಷವು ಬಿಜೆಪಿ ಜೊತೆಗೂ ಮಾತುಕತೆ ನಡೆಸಿದೆ. ಒಂದು ವೇಳೆ ಗೌಡರು ಸ್ಪರ್ಧೆ ಮಾಡದೇ ಹೊದಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆಯೂ ಕಾಂಗ್ರೆಸ್ ಈವರೆಗೆ ತುಟಿಬಿಚ್ಚಿಲ್ಲ.
ಬದಲಾಗಿ ಜೆಡಿಎಸ್ ಪಕ್ಷವೇ ಕಾಂಗ್ರೆಸಿಗೆ ಬೆಂಬಲ ಸೂಚಿಸಿದರೇ ಆಗ ಆ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗೆಗೂ ವ್ಯಾಪಕ ಚರ್ಚೆ ನಡೆದಿದೆ.
ಹಾಲಿ ಸಂಸದ ಹರಿಪ್ರಸಾದ್ ಮರು ಆಯ್ಕೆ ಬಯಸಿದ್ದರೇ, ತುಮಕೂರಿನ ಮಾಜಿ ಸಂಸದ ಮುದ್ದುಹನುಮೇ ಗೌಡರು ಸಹ ಕಣ್ಣಿಟ್ಟಿದ್ದಾರೆ. ಅದೇರೀತಿ ಜೆಡಿಎಸ್ ನಡೆ ನೋಡಿಕೊಂಡು ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಜೆಡಿಎಸ್ ಶಾಸಕರು ಸಭೆಸೇರಿ ಇಂದು ದೇಶದ ಮಾಜಿ ಪ್ರಧಾನಿ ದೇವೇಗೌಡರನ್ನು ಕಣಕಿಳಿಸಲು ಒಕ್ಕೋರಲಿನಿಂದ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ದೊಡ್ಡಗೌಡರು ಮಾತ್ರ ಈ ಬಗ್ಗೆ ಇನ್ನು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಅವರ ನಿರ್ಧಾರಕ್ಕಾಗಿ ಪಕ್ಷದ ಶಾಸಕರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.