CRIMENEWSಬೆಂಗಳೂರು

ಮೆಜೆಸ್ಟಿಕ್ BMTC: ಟೀ ಚೆನ್ನಾಗಿರುವುದಿಲ್ಲ ಬೇರೆ ಅಂಗಡಿಗೆ ಹೋಗೋಣ ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ- ಆರೋಪಿ ಬಂಧನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಈ ಅಂಗಡಿಯಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಸಹೋದ್ಯೋಗಿಗೆ ಹೇಳಿದ್ದಕ್ಕೆ ಕುಪಿತನಾದ ಟೀ ಮಾರುವ ಅಪರಿಚಿತ ವ್ಯಕ್ತಿ ಬಿಎಂಟಿಸಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಬೈದು ಏಕಾಏಕಿ ಹಲ್ಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಮೆಜೆಸ್ಟಿಕ್‌ನಲ್ಲಿ ನಡೆದಿದೆ.

ಮೆಜೆಸ್ಟಿಕ್‌ ಪ್ಲಾಟ್‌ಫಾರಂ ನಂ.27ರಲ್ಲಿರುವ ಟೀ ಶಾಪ್‌ ನಂ.21ರಲ್ಲೇ ಹಲ್ಲೆ ಮಾಡಿರುವುದು. ರಾಜಾನುಕುಂಟೆಯ ಬಿಎಂಟಿಸಿ ಘಟಕ-46ರ ಚಾಲಕ ಮೂಗಪ್ಪ ಗೂಳಪ್ಪನವರ್ ಹಲ್ಲೆಗೊಳಗಾದವರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಉಪ್ಪಾರಪೇಟೆ ಪೊಲಿಸ್ ಠಾಣೆಗೆ  ಬಂದು ದೂರು ನೀಡಿದ್ದು, ಚಾಲಕ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಿದ್ದಾರೆ.

ದೂರಿನಲ್ಲೇನಿದೆ?: ರಾಜಾನುಕುಂಟೆಯಲ್ಲಿರುವ ಬಿಎಂಟಿಸಿ ಡಿಪೋ-46ರಲ್ಲಿ ಬಸ್ ಚಾಲಕನಾಗಿ ಮೂಗಪ್ಪ ಗೂಳಪ್ಪನವರಾದ ನಾನು ಕೆಲಸ ಮಾಡುತ್ತಿದ್ದು, ಇಂದು ಅಂದರೆ ಸೆ.13ರಂದು ಬೆಳಗ್ಗೆ ಸುಮಾರು 06:30 ಗಂಟೆಗೆ ಡಿಪೋದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ.  ಸಹೋದ್ಯೋಗಿ ಅರವಿಂದ್ ಎಂಬುವರು  ನಿರ್ವಾಹಕರಾಗಿ ಬಂದರು.  ನಾವು ದೊಡ್ಡ ಬಳ್ಳಾಪುರ-ಮೆಜೆಸ್ಟಿಕ್ ರೂಟ್‌ನಲ್ಲಿ ಕರ್ತವ್ಯ ಮಾಡುತ್ತಿದ್ದೆವು.

ಈ ನಡುವೆ ನಾವು ಡಿಪೋದಿಂದ ಹೊರಟು ಮೆಜೆಸ್ಟಿಕ್‌ ಬೆಳಗ್ಗೆ ಸುಮಾರು 08:30 ಗಂಟೆಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು  ಪ್ಲಾಟ್ ಫಾರಂ ನಂ.27 ರಲ್ಲಿ ನಿಲ್ಲಿಸಿದ್ದೆವು.  ಆಗ ನನ್ನ ಸ್ನೇಹಿತನೂ ಆದ ಸಹೋದ್ಯೋಗಿ ಚಾಲಕ ರಮೇಶ್ ಎಂಬುವರು ಇದೇ ಪ್ಲಾಟ್‌ಫಾರಂ ನಲ್ಲಿಯೇ ಇದ್ದು, ನನ್ನನ್ನು ನೋಡಿ ಟೀ ಕುಡಿಯಲು ಹೋಗೋಣ ಎಂದು ಕರೆದರು.

ಆಗ ನಾನು ಬಸ್ ಇಳಿದು ಆತನ ಬಳಿಗೆ ಹೋದಾಗ ಅವರು ಅದೇ ಪ್ಲಾಟ್‌ಫಾರಂ ನಲ್ಲಿದ್ದ ಶಾಪ್ ನಂ.21 ರಲ್ಲಿನ ಟೀ ಅಂಗಡಿಯ ಬಳಿಗೆ ಕರೆದುಕೊಂಡು ಹೋದರು. ಆಗ ನಾನು ಇಲ್ಲಿ ಬೇಡ ಇಲ್ಲಿ ಟೀ ಚೆನ್ನಾಗಿರುವುದಿಲ್ಲ ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿದ್ದ ಟೀ ಅಂಗಡಿಗೆ ಹೋಗೋಣ ಎಂದು ಹೇಳುತ್ತಿದ್ದಾಗ ಟೀ ಅಂಗಡಿಯಲ್ಲಿದ್ದ ಅಪರಿಚಿತ ವ್ಯಕ್ತಿ ನನ್ನನ್ನು ಏಕಾಏಕಿ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಬೈದನು.

Advertisement

ಅಲ್ಲದೆ ನಮ್ಮ ಟೀ ಅಂಗಡಿಯ ಬಗ್ಗೆಯೇ ತಪ್ಪಾಗಿ ಮಾತನಾಡುತ್ತೀಯಾ? ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ, ಅಂಗಡಿಯಲ್ಲಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಅಂಗಡಿಯಿಂದ ಹೊರ ಬಂದು ನನ್ನ ತಲೆಗೆ 2-3 ಬಾರಿ ಹೊಡೆದ. ಇದರಿಂದಾಗಿ ನನ್ನ ತಲೆಯಲ್ಲಿ ರಕ್ತಸ್ರಾವವಾಯಿತು. ಆಗ ನಾನು ಕಿರುಚಿಕೊಂಡು ಕೆಳಗೆ ಬಿದ್ದೆ.

ಈ ವೇಳೆ ಜೊತೆಯಲ್ಲಿದ್ದ ಸಹೋದ್ಯೋಗಿ ರಮೇಶ್ ಮತ್ತು ಇತರರು ನನ್ನನ್ನು ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಚಿಕಿತ್ಸೆ ಪಡೆದ ಬಳಿಕ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದು, ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ, ನನ್ನ ತಲೆಗೆ ಹೊಡೆದು ಹಲ್ಲೆ ಮಾಡಿದ ಶಾಪ್ ನಂ.21 ರಲ್ಲಿನ ಟೀ ಅಂಗಡಿಯಲ್ಲಿ ಕೆಲಸ ಅವರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!