ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲೆ ಹೊತ್ತು ಉರಿದು ಸಂರ್ಪೂಣ ಸುಟ್ಟು ಕರಕಲಾದ ಘಟನೆ ನಗರದ ಎಚ್ಎಎಲ್ ಮುಖ್ಯದ್ವಾರದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಸೋಮವಾರ ಬೆಳಗ್ಗಿನ ಜಾವ 5:10ಕ್ಕೆ ಅಗ್ನಿ ದುರಂತ ಸಂಭವಿಸಿದ್ದು, ವಘಡದ ವೇಳೆ ಬಸ್ (ಸಂಖ್ಯೆ KA57 F 4568) ಮೆಜೆಸ್ಟಿಕ್ನಿಂದ ಕಾಡುಗೋಡಿಗೆ ತೆರಳುತ್ತಿತ್ತು. ಈ ಬಸ್ನಲ್ಲಿ ಸುಮಾರು 75 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಬಸ್ ಚಲಿಸುತ್ತಿದ್ದಂತೆ ಇಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಚಾಲಕ, ನಿರ್ವಾಹಕರು ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಕ್ರಮೇಣ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು ಬಸ್ ಧಗಧಗಿಸಿದೆ. ಇನ್ನು ಚಾಲಕನ ಸಮಯಪ್ರಜ್ಷೆಯಿಂದ ಬಸ್ನಲ್ಲಿದ್ದ 75 ಪ್ರಯಾಣಿಕರು ಸೇಫ್ ಆಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಎಚ್ಎಎಲ್ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ, ಇತ್ತೀಚೆಗೆ ಕೆಟ್ಟುಹೋಗುವ ಬಸ್ಗಳ ಬಿಡಿಭಾಗಗಳನ್ನು ಸರಿಯಾಗಿ ಅಳವಡಿಸದೆ ಈ ರೀತಿಯ ದುರಂತಗಳು ಸಂಭವಿಸುತ್ತಿವೆ ಎಂದು ನೌಕರರು ಆರೋಪಿಸಿದ್ದಾರೆ.

ಇನ್ನು ಬಸ್ ಖಂಡಿಷನ್ ಸರಿಯಿಲ್ಲ ಎಂದು ನಾವು ಲಾಗ್ ಶೀಟ್ನಲ್ಲಿ ನಮೂದಿಸಿದರೆ ನಮ್ಮ ವಿರುದ್ಧವೆ ಡಿಎಂಗಳು ಮೆಮೋ ಕೊಡುತ್ತಾರೆ, ನೀವೆ ಸರಿಯಿಲ್ಲ ಬಸ್ಮೇಲೆ ಏಕೆ ಹೇಳುತ್ತೀರಿ ಎಂದು ಬಾಯಿಬಂದಂತೆ ಬೈಯುತ್ತಾರೆ. ಹೀಗಾಗಿ ಕೆಲ ಚಾಲಕರು ಬಸ್ನಲ್ಲಿ ದೋಷ ಕಾಣಿಸಿಕೊಂಡರು ಅದನ್ನು ತಿಳಿಸುತ್ತಿಲ್ಲ. ಇದು ಇಂಥ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.
Related

 










