ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಡೆಹ್ರಾಡೂನ್‌ನಲ್ಲಿ ಮಹಾಮೇಘಸ್ಫೋಟ ಸಂಭವಿಸಿದ್ದು, ಮನೆಗಳು ಮತ್ತು ಐಟಿ ಪಾರ್ಕ್ ಪ್ರದೇಶ ಜಲಾವೃತಗೊಂಡಿದೆ. ತಪೋವನ್‌ನಲ್ಲಿ ಹಲವಾರು ಮನೆಗಳು ಮುಳುಗಿದ್ದು, ಇಬ್ಬರು ಕಾಣೆಯಾಗಿದ್ದಾರೆ.
ಕಾರ್ಲಿಗಾಡ್ ನದಿಯಲ್ಲಿ ಉಂಟಾದ ಭಾರೀ ಪ್ರವಾಹದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹಾನಿ ಸಂಭವಿಸಿದ್ದು ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಭಾರೀ ಮತ್ತು ನಿರಂತರ ಮಳೆಯಿಂದಾಗಿ ನದಿ ಅಪಾಯಕಾರಿ ಮಟ್ಟ ತಲುಪಿದ್ದು, ಸೋಮವಾರ ರಾತ್ರಿ ಪ್ರಮುಖ ಸೇತುವೆ ಕುಸಿದು ಬಿದ್ದಿದೆ. ನದಿಪಾತ್ರದಲ್ಲಿರುವ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗಿದೆ.
ಡೆಹ್ರಾಡೂನ್‌ನ ಸಹಸ್ರಧಾರದಲ್ಲಿ ಭಾರೀ ಮಳೆಯಿಂದಾಗಿ ಕೆಲವು ಅಂಗಡಿಗಳು ಹಾನಿಗೊಳಗಾಗಿವೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಧಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇನ್ನು ಕೇಂದ್ರದಿಂದ ಸಂಪೂರ್ಣ ಸಹಕಾರದ ಭರವಸೆ ನೀಡಿದ ಪ್ರಧಾನಿ, ಈ ವಿಪತ್ತಿನ ಸಮಯದಲ್ಲಿ ಕೇಂದ್ರ ಸರ್ಕಾರ ಉತ್ತರಾಖಂಡದೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.
ಭಾರೀ ಮಳೆಯಿಂದ ಉಂಟಾದ ಹಾನಿಯ ಕುರಿತು ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿಯೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. ಗೃಹ ಸಚಿವಾಲಯದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಪ್ರಯತ್ನಗಳಿಗೆ ಕೇಂದ್ರದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿಯಾಗಿ, ಋಷಿಕೇಶದಲ್ಲಿರುವ ಚಂದ್ರಭಾಗ ನದಿ ಇಂದು ಬೆಳಗ್ಗೆಯಿಂದ ಉಕ್ಕಿ ಹರಿಯುತ್ತಿದ್ದು, ಹೆದ್ದಾರಿಗೆ ನೀರು ಹರಿಯುತ್ತಿದೆ ಎಂದು ಎಸ್‌ಡಿಆರ್‌ಎಫ್ ತಿಳಿಸಿದೆ. ಇನ್ನು ನದಿಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದೆ, ಆದರೆ ಹಲವಾರು ವಾಹನಗಳು ಇನ್ನೂ ನೀರಿನಲ್ಲಿ ಸಿಲುಕಿಕೊಂಡಿವೆ.
ಏತನ್ಮಧ್ಯೆ, ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಸ್ಥಳೀಯ ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಅವರೊಂದಿಗೆ ಇದ್ದಾರೆ.
ಇನ್ನು ಯಾವುದೇ ಬಾಧಿತ ಕುಟುಂಬವು ಅನಾನುಕೂಲತೆಯನ್ನು ಎದುರಿಸದಂತೆ ಮತ್ತು ಪರಿಹಾರ ಸಾಮಗ್ರಿಗಳು, ಸುರಕ್ಷಿತ ಆಶ್ರಯ, ಆಹಾರ, ನೀರು ಮತ್ತು ಆರೋಗ್ಯ ಸೌಲಭ್ಯಗಳನ್ನು ತಕ್ಷಣವೇ ಒದಗಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Related
