ಮೈಸೂರು: ಸಿದ್ದರಾಮಯ್ಯ ಮಾತು ಕೇಳಿ ಕುರುಬ ಸಮುದಾಯ ಸ್ವಾಮೀಜಿಗಳು ಬೀದಿಗಿಳಿದರೆ ಹುಷಾರ್- ವಿಶ್ವನಾಥ್ ಎಚ್ಚರಿಕೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಸಕ್ತಿ ಇದ್ದರೆ ಎಂದೋ ಕ್ಯಾಬಿನೆಟ್‌ನಲ್ಲಿ ಇಟ್ಟು ಪಾಸ್ ಮಾಡಬೇಕಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಶಿಫಾರಸು ಮಾಡಿದ್ರು. ಇದನ್ನು ಸಿದ್ದರಾಮಯ್ಯ ಸರ್ಕಾರ ಕುಲ ಶಾಸ್ತ್ರ ಅಧ್ಯಯನವನ್ನು ಕೇಂದ್ರಕ್ಕೆ ಕಳುಹಿಸಿದೆ. ಕಾನೂನು ಪ್ರಕಾರ ಸರಿಯಾದ ಕ್ರಮದಲ್ಲಿ ಆಗಲಿಲ್ಲ. ಇಲ್ಲಿಯವರೆಗೂ ಸಿದ್ದರಾಮಯ್ಯಗೆ ಆಸಕ್ತಿ ಇರಲಿಲ್ಲ ಎಂದು ಆರೋಪಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಬಹಳ ಒತ್ತಾಯವಿದೆ, ಹೀಗಾಗಿ ಸಿದ್ದರಾಮಯ್ಯ ಕುರುಬರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ತನು ಮನ ಧನ ಎಲ್ಲವೂ ಕುರುಬ ಸಮುದಾಯದಿಂದ ಅರ್ಪಣೆ ಆಗಿದೆ. ಆದರೆ ಸಮುದಾಯಕ್ಕೆ ಏನು ಮಾಡಿಲ್ಲ. ಸಮುದಾಯದಲ್ಲಿ ಯಾರನ್ನೂ ಬೆಳೆಸಲಿಲ್ಲ. ಕುರುಬ ಸಮುದಾಯದ ನಾಯಕತ್ವವನ್ನು ನನ್ನನ್ನು ಸೇರಿದಂತೆ ತುಳಿದಿದ್ದೀರಿ ಅಂತ ವಿಶ್ವನಾಥ್ ಕಿಡಿಕಾರಿದರು.
ಕುರುಬ ಸ್ವಾಮೀಜಿಗಳಿಗೆ ಎಚ್ಚರಿಕೆ: ಕುರುಬ ಸಮುದಾಯ ಕಷ್ಟದಲ್ಲಿದ್ದಾಗ ಯಾವ ಹೋರಾಟದಲ್ಲೂ ಯಾರಿಗೂ ಬೆಂಬಲ ಕೊಟ್ಟಿಲ್ಲ. ಸಿದ್ದರಾಮಯ್ಯ ಮಾತು ಕೇಳಿ ಕುರುಬ ಸಮುದಾಯದ ಸ್ವಾಮೀಜಿಗಳು ಬೀದಿಗಿಳಿಯಬಾರದು. ಒಂದು ವೇಳೆ ಬೀದಿಗಿಳಿದರೆ ತಲೆದಂಡವಾಗಬೇಕಾಗುತ್ತದೆ ಹುಷಾರ್ ಎಂದು ವಿಶ್ವನಾಥ್ ಸ್ವಾಮೀಜಿಗಳನ್ನು ಎಚ್ಚರಿಸಿದ್ದಾರೆ. ನಿಮ್ಮನ್ನು ಸ್ವಾಮಿ ಮಾಡಿದ್ದು ನಾನು. ಮೊದಲ ಪೀಠಾಧ್ಯಕ್ಷ ಆಗಿದ್ದು ನಾನು. ಸಿದ್ದರಾಮಯ್ಯ ಪರ ಬೀದಿಗೆ ಬರಬೇಡಿ. ನೀವೆಲ್ಲ ಸಿದ್ದರಾಮಯ್ಯನ ಕಾಲಾಳುಗಳಲ್ಲ, ಕುರುಬ ಸಮುದಾಯದ ಕಟ್ಟಾಳು ನೀವು. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಪರ ಬೀದಿಗೆ ಬರಬಾರದು. ಬಂದರೆ ನಾವು ಸುಮ್ಮನಿರಲ್ಲ ಎಂದು ಚ್ಚರಿಕೆ ನೀಡಿದರು.
ಸಿದ್ದರಾಮಯ್ಯಗೂ, ಮಠಕ್ಕೂ ಸಂಬಂಧವೇ ಇಲ್ಲ: ಇನ್ನು ಸಿದ್ದರಾಮಯ್ಯಗೂ ಮಠಕ್ಕೂ ಏನು ಸಂಬಂಧವೇ ಇಲ್ಲ. ಮಠ ಕಟ್ಟಿದ ಮೇಲೆ ಸಿದ್ದರಾಮಯ್ಯ ಬಂದಿದ್ದು. ಸಿದ್ದರಾಮಯ್ಯ ಕುರುಬರಿಗೆ ಶಿಕ್ಷಣವನ್ನೂ ಕೊಡಲಿಲ್ಲ. ಎಸ್‌ಎಸ್‌ಎಲ್‌ಸಿ ಫೇಲ್ ಆದವರೇ ನಿಮ್ಮ ಜತೆ ಇರೋದು. ಕುರುಬರ ಕತೆ ಇಂಗ್ಲಿಷ್ ಸಿನಿಮಾದಂತೆ ಆಗಿದೆ. ಭಾಷೆ ಗೊತ್ತಿಲ್ಲದೇ ಸಿಳ್ಳೆ ಹೊಡೆದಂತೆ ಇರುತ್ತಾರೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.
ವರದಿಯನ್ನು 10 ವರ್ಷ ತಲೆಕೆಳಗಿಟ್ಟು ಮಲಗಿದರು: ರಾಜ್ಯದಲ್ಲಿ ಜಾತಿಗಣತಿಗೆ ಸರ್ಕಾರ ಆದೇಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಕಾಂತರಾಜು ಆಯೋಗ ವರದಿ ನೀಟಾಗಿ ಮಾಡಿತ್ತು. ಅದರೆ ಅದರ ಬಿಡುಗಡೆ ಮಾಡಲು ಧೈರ್ಯ ತೋರದ ಹೇಡಿ ** ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದು, ಕಾಂತರಾಜು ಆಯೋಗದ ವರದಿಯನ್ನು 10 ವರ್ಷ ತಲೆಕೆಳೆಗೆ ಇಟ್ಟು ಮಲಗಿದ್ದ ಸಿದ್ದರಾಮಯ್ಯ. ಇದೇ ತೋರಿಸುತ್ತೆ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಏನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

Related
