KSRTC ಚಿತ್ರದುರ್ಗ: ಕರ್ತವ್ಯದ ವೇಳೆ ತಾಂತ್ರಿಕ ಸಿಬ್ಬಂದಿಗಳು ಮೊಬೈಲ್ಫೋನ್ ಬಳಸಿದರೆ ಶಿಸ್ತುಕ್ರಮ- ವಿ. ನಿಯಂತ್ರಣಾಧಿಕಾರಿ ಆದೇಶ

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗ ಎಲ್ಲ ಘಟಕ ಮತ್ತು ವಿಭಾಗೀಯ ಕಾರ್ಯಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಮೊಬೈಲ್ ಬಳಕೆ ಮಾಡದಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ತಾಂತ್ರಿಕ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಮೊಬೈಲ್ ಬಳಸದಂತೆ ವಿಭಾಗೀಯ ಯಾಂತ್ರಿಕ ಅಭಿಯಂತರರು, ಎಲ್ಲ ಘಟಕ ವ್ಯವಸ್ಥಾಪಕರು ಮತ್ತು ಸಹಾಯಕ ಕಾರ್ಯಾ ಅಧಿಕ್ಷಕರು/ ಪಾರುಪತ್ತೆಗಾರರು ಕೂಡಲೆ ಅಗತ್ಯ ಕ್ರಮ ಎಂದು ಗುರುವಾರ (ಸೆ.18ರಂದು) ಆದೇಧಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಲ ಘಟಕ ಮತ್ತು ವಿಭಾಗೀಯ ಕಾರ್ಯಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ನಿರಂತರವಾಗಿ ಮೊಬೈಲ್ ದೂರವಾಣಿಯನ್ನು ಬಳಸುವುದರಿಂದ ದೈನಂದಿನ ತಾಂತ್ರಿಕ ಕೆಲಸಕಾರ್ಯಗಳಲ್ಲಿ ವಿಳಂಬವಾಗುತ್ತಿದೆ.
ಹೀಗಾಗಿ ಆಡಳಿತಾತ್ಮಕ ಕಾರಣಗಳು ಮತ್ತು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕೂಡಲೆ ಜಾರಿಗೆ ಬರುವಂತೆ ಎಲ್ಲ ಘಟಕ/ ವಿಭಾಗೀಯ ಕಾರ್ಯಾಗಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ತಾಂತ್ರಿಕ ಸಿಬ್ಬಂದಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಮೊಬೈಲ್ ಬಳಕೆ ಮಾಡಬಾರದು. ಒಂದು ವೇಳೆ ಮೊಬೈಲ್ ಬಳಕೆ ಮಾಡಿದಲ್ಲಿ ಅಂತಹ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಮೊಬೈಲ್ ಫೋನ್ ಬಳಿಕೆ ಮಾಡಿದರೆ ವಿಭಾಗೀಯ ಯಾಂತ್ರಿಕ ಅಭಿಯಂತರರು ಹಾಗೂ ತಾಂತ್ರಿಕ ಸಿಬ್ಬಂದಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಮೊಬೈಲ್ ದೂರವಾಣಿ ಬಳಕೆ ಮಾಡಿದಲ್ಲಿ ಅಂತಹ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ವರದಿಯನ್ನು ಸಲ್ಲಿಸಲು ತಿಳಿಸಿದ್ದಾರೆ.
ಜತೆಗೆ ವಿಭಾಗೀಯ ಭದ್ರತಾ ನಿರೀಕ್ಷಕರು ಹಾಗೂ ಎಲ್ಲ ಘಟಕದ/ ವಿಭಾಗೀಯ ಕಾರ್ಯಾಗಾರದ ಮುಖ್ಯ ಭದ್ರತಾ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಪ್ರತಿ ದಿನ ಈ ಕುರಿತು ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Related
