ನ್ಯೂಡೆಲ್ಲಿ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಕಾದಾಟದಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದು ಸಂಚಲನ ಮೂಡಿಸಿದೆ. ಇದೀಗ ಚೀನಾ ಯೋಧರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಚೀನಾ ಸೈನಿಕರು ಗಾಲ್ವಾನ್ ಕಣಿವೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿದ್ದರು. ಈ ವೇಳೆ ಭಾರತೀಯ ಸೇನೆ ಅವರನ್ನು ಹಿಂದೆ ಸರಿಯುವಂತೆ ಎಚ್ಚರಿಕೆ ನೀಡಿದ್ದರೂ ಅದನ್ನು ನಿರಾಕರಿಸಿದ್ದರಿಂದ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ನಡೆದಿದೆ ಎಂದು ವರದಿಯಾಗಿದೆ.
ಉಭಯ ದೇಶದ ಯೋಧರ ನಡುವಿನ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಈ ಉಭಯ ದೇಶಗಳ ನಡುವಿನ ಸೈನಿಕರು ಗುಂಡಿನ ದಾಳಿ ನಡೆಸಿಲ್ಲ. ಬದಲಿಗೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ್ತಿ ವಾಂಗ್ ವೆನ್ವೆನ್ ಎಂಬುವರು ಟ್ವೀಟ್ ಮಾಡಿ ಕಳೆದ ರಾತ್ರಿ ಭಾರತ ಮತ್ತು ಚೀನಾ ಯೋಧರ ನಡುವಿನ ಸಂಘರ್ಷದಲ್ಲಿ ಐವರು ಚೀನಾದ ಸೈನಿಕರು ಹತ್ಯೆಯಾಗಿದ್ದು 11 ಜನ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರಕ್ಷಣಾ ಸಚಿವರ ತುರ್ತು ಸಭೆ
ಚೀನಾದೊಂದಿಗಿನ ಗಡಿ ಗಲಾಟೆಯಲ್ಲಿ ಮೂವರು ಯೋಧರು ಹುತಾತ್ಮರಾದ ಬೆನ್ನಲ್ಲಿಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ್ದಾರೆ.
ಮೂರೂ ಸೇನಾ ವೀಭಾಗಗಳ ಮುಖ್ಯಸ್ಥರು ಹಾಗೂ ಮಹಾದಂಡನಾಯಕ ಬಿಪಿನ್ ರಾವತ್ ಜತೆ ರಾಜನಾಥ್ ಪರಿಸ್ಥಿತಿಯ ಅವಲೋಕನ ನಡೆಸಿದರು.
ಇದೇ ವೇಳೆ ರಕ್ಷಣಾ ಸಚಿವ ರಾಜನಾಥ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜತೆ ಸಹ ಘಟನೆ ಮತ್ತು ಭಾರತದ ಸಂಭಾವ್ಯ ಉತ್ತರದ ಬಗ್ಗೆ ಮಾತುಕತೆ ನಡೆಸಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.