ಬಳ್ಳಾರಿ: ತಮ್ಮ ಸಿಬ್ಬಂದಿಯನ್ನು ತನ್ನ ಕಾರ್ಖಾನೆಯ ಟೌನ್ ಶಿಫ್‌ನಲ್ಲಿ ಉಳಿಸಿಕೊಂಡೇ ಕೆಲಸ ಮಾಡಿಕೊಳ್ಳಬೇಕು ಮತ್ತು ಸಿಬ್ಬಂದಿ ಹೊರಗಡೆ ಹಳ್ಳಿ ಮತ್ತು ನಗರಕ್ಕೆ ಬರದ ರೀತಿಯಲ್ಲಿ ಪ್ರವೇಶ ಮತ್ತು ಹೊರಹೋಗುವಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಅಗತ್ಯ ಸೇವೆಗಳನ್ನು ಅನುಮತಿ ಪಡೆದು ಒಳ ಸಂಚರಿಸುವುದನ್ನು ಹೊರತುಪಡಿಸಿ ಉಳಿದವುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಆದೇಶವು ಜೂ.18ರಿಂದ ಜಾರಿಗೆ ಬರಲಿದ್ದು ಜೂ.30ರವರೆಗೆ ಜಾರಿಯಲ್ಲಿರಲಿದೆ. ಜಿಂದಾಲ್ ಒಳ ಪ್ರವೇಶಿಸುವಿಕೆ ಮತ್ತು ಹೊರಬರುವಿಕೆ ಗೇಟ್ ಬಳಿ ಸಂಪೂರ್ಣ ಬ್ಯಾರಿಕೆಡ್ ಅಳವಡಿಸಲಾಗುತ್ತಿದೆ ಎಂದು ವಿವರಿಸಿದ ಅವರು ಕೊರೊನಾ ಪ್ರಕರಣಗಳಿಂದ 838ಜನ ಜಿಂದಾಲ್ ಸಿಬ್ಬಂದಿ ಬಳಲುತ್ತಿದ್ದು,ಇವರನ್ನು ಸಂಬಳಸಹಿತ ರಜೆ ಮೇಲೆ ಜಿಂದಾಲ್ ಈಗಾಗಲೇ ಕಳುಹಿಸಲು ಒಪ್ಪಿಕೊಂಡಿದೆ ಎಂದರು.
ಇದುವರೆಗೆ 146 ಪ್ರಕರಣಗಳು ದಾಖಲಾಗಿದ್ದು,633 ಪ್ರಥಮ ಸಂಪರ್ಕಿತರಿದ್ದು, ಅವರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಕೋವಿಡ್ ಕೇಸ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬಂದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವ ದೃಷ್ಟಿಯಿಂದ ತಾಲೂಕು ಆಸ್ಪತ್ರೆಗಳನ್ನು ಅಗತ್ಯ ಸಲಕರಣೆಗಳೊಂದಿಗೆ ಸಿದ್ಧಪಡಿಸಲಾಗಿದೆ ಎಂದರು.
ಎಸ್ಪಿ ಸಿ.ಕೆ.ಬಾಬಾ ಮಾತನಾಡಿ, ಸಂಪೂರ್ಣ ಬ್ಯಾರಿಕೆಡ್ ಹಾಕಲಾಗುವುದು ಮತ್ತು ಯಾವುದೇ ರೀತಿಯ ಚಲನವಲನವಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಶೇಖ್ ತನ್ವೀರ್ ಅಸೀಫ್ ಮತ್ತಿತರರು ಇದ್ದರು.