ಬೆಂಗಳೂರು: ಕೊರೊನಾ ಸೋಂಕು ಏರಿಕೆಯಾಗುತ್ತಿರುವುದರ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ವಿರುದ್ಧ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿನಕ್ಕೆ ಹೆಚ್ಚಾಗುತ್ತಿದ್ದರೂ ಸಚಿವರು ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದ್ದಾರೆ. ಈ ಸಮಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಮಕ್ಕಳ ಜೀವಕ್ಕೆ ಕಂಟಕ ಎಂದು ಆರೋಪಿಸಿ ಶಿಕ್ಷಣ ಸಚಿವರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಮುಖ್ಯಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತ ಆದರ್ಶ ಅಯ್ಯರ್ ಸಚಿವ ಸುರೇಶ್ ಕುಮಾರ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ 22ನೇ ಸೆಕ್ಷನ್ ಪ್ರಕಾರ ಇಂಟರ್ನಲ್ ಅಸೆಸ್ಮೆಂಟ್ ಅಂಕಗಳನ್ನು ನೋಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬಹುದು. ಆದರೆ ಆ ಕಾನೂನನ್ನು ಬದಿಗಿಟ್ಟು ಮಕ್ಕಳ ಬದುಕನ್ನು ಅಪಾಯಕ್ಕೆ ತಳ್ಳಲು ಪರೀಕ್ಷೆಯನ್ನು ಮಾಡೇ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಪ್ರಕರಣ ದಾಖಲಾಗದೆ ಹೋದರೆ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಅಯ್ಯರ್ ಹೇಳಿದ್ದಾರೆ.