ಮೈಸೂರು: ತಿ. ನರಸೀಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಮೂಲಕ ಎಪಿಎಂಸಿ ನೂತನ ಅಧ್ಯಕ್ಷರಾಗಿ ಮಾದೇಗೌಡನ ಹುಂಡಿ ಕ್ಷೇತ್ರದ ಎನ್. ಅನಿಲ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಕಲಿಯೂರು ಕ್ಷೇತ್ರದ ಅಭ್ಯರ್ಥಿ ಶಂಕರ್ ನಾಯಕ್ ಅವಿರೋಧ ಆಯ್ಕೆಯಾಗಿದ್ದಾರೆ
ನಾಮಪತ್ರ ಸಲ್ಲಿಸಲು ನಿಗದಿಪಡಿಸಲಾಗಿದ್ದ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅನಿಲ್ ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಕೆ. ಶಂಕರ ನಾಯಕ್ ಬಿಟ್ಟಿರೆ ಬೇರಾರು ಉಮೇದುವಾರಿಕೆ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿ ಡಿ. ನಾಗೇಶ್ ಈ ಇವರಿಬ್ಬರ ಆಯ್ಕೆಯನ್ನು ಘೋಷಿಸಿದರು.
ಎಪಿಎಂಸಿಯಲ್ಲಿ ಒಟ್ಟು ಹದಿನಾರು ಸದಸ್ಯರ ಬಲವಿದ್ದು, ಈ ಪೈಕಿ ಕಾಂಗ್ರೆಸ್ ಪಕ್ಷದ ಬೆಂಬಲಿತ 5, ಜೆಡಿಎಸ್ ನ 5 ಹಾಗೂ ಬಿಜೆಪಿ ಬೆಂಬಲಿತ ಒಬ್ಬರು ಆಯ್ಕೆಗೊಂಡ ಸದಸ್ಯರಿದ್ದಾರೆ. ಇನ್ನು ಬಿಜೆಪಿಯ ಮೂವರು ನಾಮ ನಿರ್ದೇಶಿತ ಸದಸ್ಯರಿದ್ದು, ವರ್ತಕರ ಕ್ಷೇತ್ರ ಹಾಗೂ ಎಪಿಎಂಸಿಯಿಂದ ತಲಾ ಒಬ್ಬರು ಆಯ್ಕೆಗೊಂಡಿದ್ದಾರೆ.
ಎಪಿಎಂಸಿಗೆ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಅನಿಲ್ ಕುಮಾರ್ ಹಾಗೂ ಶಂಕರ ನಾಯಕ್ ಅವರನ್ನು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದ್ದಾರೆ.