ಅ.9ರಂದು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ EPS ಪಿಂಚಿದಾರರ ಬೃಹತ್ ಪ್ರತಿಭಟನೆ: BMTC -KSRTC ನಿನೌಸಂ ಅಧ್ಯಕ್ಷ ನಂಜುಂಡೇಗೌಡ


ಬೆಂಗಳೂರು: ಇಪಿಎಸ್ ಪಿಂಚಣಿದಾರರ 93ನೇ ಮಾಸಿಕ ಸಭೆ ಲಾಲ್‌ಬಾಗ್ ಆವರಣದಲ್ಲಿ (ಇಂದು) ಭಾನುವಾರ ಬಹಳ ಯಶಸ್ವಿಯಾಗಿ ಜರುಗಿದ್ದು, ಸಭೆಗೆ ನೂರಾರು ಇಪಿಎಸ್ ನಿವೃತ್ತರು ಆಗಮಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಈ ಸಭೆಯಲ್ಲಿ ಮುಖ್ಯವಾಗಿ ಕೈಗೊಂಡ ನಿರ್ಣಯವೇನೆಂದರೆ, ಈಗಾಗಲೇ ನಿರ್ಧರಿಸಿದಂತೆ ಇದೇ ಅ.9ರಂದು ಫ್ರೀಡಂಪಾರ್ಕ್ ಮೈದಾನದಲ್ಲಿ ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದರು.
ಇನ್ನು ಈ ಸಭೆಗೆ ಮುಖ್ಯ ಅತಿಥಿಗಳಾಗಿ ರಾಜ್ಯ ಉಚ್ಚ ನ್ಯಾಯಾಲಯದ ನಾಲ್ಕು ಜನ ವಕೀಲರು ಆಗಮಿಸಲಿದ್ದು, ಸರ್ವೋಚ್ಚ ನ್ಯಾಯಾಲಯ ಹಾಗೂ ಇತ್ತೀಚೆಗೆ ಹಲವು ರಾಜ್ಯಗಳ ಉಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಪರಾಮರ್ಶಿಸಿ ಭಾಷಣ ಮಾಡುವ ಸಂಗತಿಯನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಈ ಪ್ರಸ್ತಾವನೆಗೆ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 11,12, 2025 ರಂದು ಬೆಂಗಳೂರು ನಗರದಲ್ಲಿ 238 ನೇ ಸಿಬಿಟಿ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪ್ರತಿಭಟನಾ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಈ ಸಭೆಯಲ್ಲಿ ನಮ್ಮ ಪ್ರಮುಖ ಬೇಡಿಕೆ ಎಲ್ಲ ಇಪಿಎಸ್ ನಿವೃತ್ತರಿಗೆ ಕನಿಷ್ಠ ಪಿಂಚಣಿ 7,500 ರೂ. ಭತ್ಯೆ + ವೈದ್ಯಕೀಯ ಸೌಲಭ್ಯ ನೀಡಬೇಕು.
ಈ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ. ನೀಡಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಎಲ್ಲ ಇಪಿಎಸ್ ನಿವೃತ್ತರಿಗೆ ಅಧಿಕ ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ತಿಳಿಸಿದರು.
ಇಂದಿನ ಮಾಸಿಕ ಸಭೆ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ಸಭೆಯ ನಿರ್ಣಯಗಳ ಬಗ್ಗೆ ಸದಸ್ಯರು ತಮ್ಮ ಹರ್ಷ ವ್ಯಕ್ತಪಡಿಸಿ, ಅಕ್ಟೋಬರ್ 9ರ ಪ್ರತಿಭಟನಾ ಸಭೆಗೆ ಹೆಚ್ಚಿನ ಇಪಿಎಸ್ ನಿವೃತ್ತರು ಆಗಮಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡೋಣ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ನಂಜುಂಡೇಗೌಡ ವಿವರಿಸಿದರು.

ಬಿಎಂಟಿಸಿ & ಕೆಎಸ್ಆರ್ ಟಿಸಿ ನಿವೃತ್ತ ನೌಕರರ ಸಂಘದ ಖಜಾಂಚಿ ಡೋಲಪ್ಪ, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಟ್ರಸ್ಟಿನ ಅಧ್ಯಕ್ಷರಾದ ಬ್ರಹ್ಮಚಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪದಾಧಿಕಾರಿಗಳಾದ ನಾಗರಾಜು, ಮನೋಹರ್, ರುಕ್ಮೇಶ್, ಕೃಷ್ಣಮೂರ್ತಿ, ರಮೇಶ್ ಹಾಜರಿದ್ದು ಸಭೆಯ ನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
Related
