ಬೆಳಗಾವಿ: ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ 700 ಹೊಸ ಬಸ್ಸುಗಳು ಹಾಗೂ ಬೆಳಗಾವಿ ನಗರಕ್ಕೆ 100 ಎಲೆಕ್ಟ್ರಿಕ್ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಿರ್ಮಾಣಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.
5 ಎಕರೆ 5 ಗುಂಟೆ ಪ್ರದೇಶದಲ್ಲಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಎಲೆಕ್ಟ್ರಿಕ್ ಬಸ್ ಘಟಕವನ್ನು ಸಹ ಸ್ಥಾಪಿಸಲಾಗುತ್ತಿದೆ. ನೂತನ ಬಸ್ ನಿಲ್ದಾಣದಲ್ಲಿ 28 ಅಂಕಣಗಳು, 1365 ಸಾರಿಗೆ ಸರತಿಗಳು ನಿರ್ಗಮಣವಾಗಲಿದ್ದು, 87 ಉಪನಗರ ಸ್ಥಳಗಳನ್ನು ಒಳಗೊಂಡಂತೆ ಒಟ್ಟು 143 ಸ್ಥಳಗಳಿಗೆ ಬಸ್ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಇನ್ನು ಪ್ರತಿ ದಿನ ಸುಮಾರು 96,000 ಜನರು ಈ ನಿಲ್ದಾಣದ ಮೂಲಕ ಪ್ರಯಾಣಿಸಲಿದ್ದಾರೆ. ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಾಲಯಗಳು, ಶಿಶುಗಳಿಗೆ ಹಾಲುಣಿಸುವ ಕೊಠಡಿ, ವಿಕಲಚೇತನರ ರಾಂಪ್ ವ್ಯವಸ್ಥೆ, ಪೊಲೀಸ್ ಚೌಕಿ, ವಿಭಾಗೀಯ ಕಚೇರಿ, ಸಬ್-ವೇ ಸಂಪರ್ಕ, ಲಿಫ್ಟ್ ಹಾಗೂ ಎಸ್ಕಲೇಟರ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಉದ್ಘಾಟನೆ, ಗೃಹ ವೈದ್ಯರ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಹಾಗೂ ರಾಣಿ ಚೆನ್ನಮ್ಮ ವಿವಿಯ ಹಿರೇಬಾಗೇವಾಡಿ ಹೊಸ ಆವರಣದಲ್ಲಿ ಪಿ.ಎಂ. ಉಷಾ ವಿವಿಧ ಕಟ್ಟಡಗಳ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ವಿವಿಯ ನೂತನ ಆವರಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.
ಸಚಿವರಾದ ಸತೀಶ್ ಜಾರಕಿಹೊಳಿ, ಶರಣ್ ಪ್ರಕಾಶ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಸಿ.ಸುಧಾಕರ್ ಸೇರಿ ಹಲವು ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Related
