NEWS

NWKRTC ಕಾರವಾರ: ಅಧಿಕಾರಿಗಳ ಬೇಜವಾಬ್ದಾರಿ ಕೆಟ್ಟು ನಿಲ್ಲುತ್ತಿರುವ ಬಸ್‌ಗಳು- ನಿತ್ಯ ಪ್ರಯಾಣಿಕರ ಪರದಾಟ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಪ್ರತಿನಿತ್ಯ ನಿರ್ಮಾಣವಾಗುತ್ತಿದೆ.

ಸಂಸ್ಥೆಯ ಕಾರವಾರ ಘಟಕದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು ಮಂಗಳವಾರ ಬೆಳಗ್ಗೆ 8.10ರ ಸುಮಾರಿಗೆ KA 31 F1554 ಕಾರವಾರದಿಂದ ಬೆಳಗಾವಿಗೆ ಹೊರಟಿದ್ದ ಬಸ್‌ ರೇಡಿಯೇಟರ್ ಬಾಯ್ಲ್‌ ಆಗಿದ್ದರಿಂದ ಬಸ್‌ ನುಜ್ಜಿಯ ದೂದ್ ಗಾಳಿ ಅರಣ್ಯ ಪ್ರದೇಶದಲ್ಲಿ ಕೆಟ್ಟು ನಿಂತಿದೆ.

ಈ ವೇಳೆ ಪ್ರಯಾಣಿಕರು ತಂದಿದ್ದ ಕುಡಿಯುವ ನೀರನ್ನು ವಾಹನಕ್ಕೆ ಹಾಕಿ ಅಲ್ಲಿಂದ ನುಜ್ಜಿಗೆ ಹೇಗೋ ಚಲಾಯಿಸಿಕೊಂಡು ನುಜ್ಜಿ ಗ್ರಾಮದ ಒಂದು ಮನೆಯಿಂದ ನೀರನ್ನು ತಂದು ಬಸ್‌ಗೆ ಹಾಕಿ ಪ್ರಯಾಣ ಬೆಳೆಸಿದ್ದಾರೆ.

ಇನ್ನು ಸೋಮವಾರ ಅ.6ರಂದು ಬೆಳಗ್ಗೆ KA 31 F1555 ಕಾರವಾರ ಬೆಳಗಾವಿ ನಡುವಿನ ಮಾರ್ಗದ ಬಸ್‌ ಜೊಯಿಡಾದಲ್ಲಿ ಹಿಂದಿನ ಟೈರ್‌ ಎಕ್ಸಲ್‌ನ ನಟ್ಟು- ಬೋಲ್ಟ್ ಲೂಜ್‌ ಪ್ಯಾಕಿಂಗ್‌ ಫೇಲ್‌ ಆಗಿದ್ದರಿಂದ oil ಲಿಕೇಜ್ ಆಗಿ ಬಸ್‌ನ ಚಕ್ರಕ್ಕೆಲ್ಲ ಮೆತ್ತಿಕೊಂಡಿತ್ತು.

ಇದಿಷ್ಟೇ ಅಲ್ಲದೆ ಈ ಹಿಂದೆಯೂ ಕೂಡ ತಾಲೂಕಿನ ಗೋಯರ್ ಗ್ರಾಮಕ್ಕೆ ಹೋಗಬೇಕಿದ್ದ 35ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಬಾಳಿಯಿಂದ 7 ಕಿಮಿ ದೂರದ ಗೋಯರ್‌ವರೆಗೆ ಕಾಡುದಾರಿಯಲ್ಲಿ ನಡೆದುಕೊಂಡು ಹೋಗಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಕೆಎ42- ಎಫ್‌-1420 ನೋಂದಣಿಯ ಈ ಬಸ್ ಕೂಡ ಕಾರವಾರ ಘಟಕಕ್ಕೆ ಸೇರಿದ್ದು, ಇದು ಡಿಪೋ ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರಿಸುತ್ತಿದೆ. ಕಾರವಾರ ಡಿಪೋದ ಅಧಿಕಾರಿಗಳು ಯಾರಿಗೂ ಕ್ಯಾರೆ ಎನ್ನುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Advertisement

ಹೀಗೆ ಪದೇಪದೇ ಬಸ್ಸುಗಳು ಕೆಟ್ಟು ನಿಲ್ಲುವದರಿಂದ ಸಾರ್ವಜನಿಕರಿಗೆ ಎಷ್ಟೊಂದು ತೊಂದರೆಯಾಗುತ್ತದೆ ಎಂಬುದು NWKRTC ಸಂಸ್ಥೆಯ ಉನ್ನತ ಅಧಿಕಾರಿಗಳ ಗಮನಕ್ಕೂ ಇದ್ದಂತಿಲ್ಲ. ಆದರೂ ಆ ಅಧಿಕಾರಿಗಳು ಕೂಡ ಜಾಣ ಮೌನವಾಗಿದ್ದಾರೆ. ಕಾರಣ ಗೊತ್ತಿಲ್ಲ.

ಅಧಿಕಾರಿಗಳ ಈ ನಡೆಯಿಂದ ತುರ್ತು ಕೆಲಸದ ಮೇಲೆ ತೆರಳುವ ಜನರು, ಪರೀಕ್ಷೆಗೆ ಅಥವಾ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ, ಕೋರ್ಟ್, ಆಸ್ಪತ್ರೆಗೆ ತೆರಳುವವರಿಗೆ ಮಾರ್ಗ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತಿರುವುದರಿಂದ ಕಾಡಿನಲ್ಲಿ ಪರದಾಡುವಂತಾಗುತ್ತಿದೆ.

ಇನ್ನು ಕಾರವಾರದ ಬಸ್ ಡಿಪೋ ವ್ಯವಸ್ಥಾಪಕರನ್ನು ತಕ್ಷಣ ಕಾರವಾರದಿಂದ ವರ್ಗಾವಣೆ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಆದರೆ ಈ ಹಿಂದೆ ಅಧಿಕಾರಿ ವರ್ಗಾವಣೆಯಾದರೂ ಅದನ್ನು ರದ್ದು ಪಡಿಸಿಕೊಂಡು ಬಂದಿದ್ದಾರೆ.

ಇನ್ನು ಬಾಳಿಯಿಂದ ಗೋಯರ್‌ವರೆಗೆ ನಡೆದುಕೊಂಡು ಹೋದ ಮಕ್ಕಳ ಪಾಡು ಹೇಳತೀರದು. ಮರುದಿನ ಬೆಳಿಗ್ಗೆ ಎದ್ದು ಅವರು ಶಾಲೆಗೆ ಬರಬೇಕು. ಈ ರೀತಿಯಲ್ಲಿ ಬಸ್ ಕೈಕೊಡುತ್ತಿರುವುದರಿಂದ ಹಾಗೂ ಕಾಡಿನ ದಾರಿಯಲ್ಲಿ ಮಕ್ಕಳು ಹೋಗುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಅಲ್ಲದೆ, ಇಂತಹ ಅಪಾಯಕಾರಿ ಕಾಡು ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆದು ಸಾಗುವುದರಿಂದ ಅವರ ತಂದೆ ತಾಯಿಗಳು ಸಹ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುವಂತಾಗಿದೆ.

ಈ ಕಾಡಿನ ದಾರಿ ವಿಷಜಂತುಗಳು, ಕರಡಿಗಳು ಓಡಾಡುವ ಪ್ರದೇಶವಾಗಿದ್ದು, ಮಕ್ಕಳು ಹೀಗೆ ರಾತ್ರಿಯ ವೇಳೆಯಲ್ಲಿ ನಡೆದಾಡುವುದು ಅಪಾಯಕಾರಿ. ಆದರೂ ವಿಧಿಯಿಲ್ಲದೆ ಜತೆಗೆ ಬೇರೆ ದಾರಿಯೇ ಇಲ್ಲದೆ ಈ ಮಕ್ಕಳು ಶಾಲಾ ಬ್ಯಾಗ್‌ಗಳನ್ನು ಹೊತ್ತುಕೊಂಡು ನಡೆದುಕೊಂಡೆ ಹೋಗುತ್ತಿದ್ದಾರೆ.

ಗೋಯರ್‌ ಗ್ರಾಮಸ್ಥರ ಪ್ರಕಾರ ಅವರ ಊರಿಗೆ ಬರುವ ಬಸ್‌ಗಳ ಸಂಖ್ಯೆ ದಿನಕ್ಕೆ ಮೂರು. ಬೆಳಿಗ್ಗೆ ಬರುವ ಬಸ್‌ನಲ್ಲಿ ಈ ವಿದ್ಯಾರ್ಥಿಗಳು ಕಾರವಾರ, ಗೋಟೆಗಾಳಿ ಹಾಗೂ ಇತರ ಪ್ರದೇಶಗಳಿಗೆ ಶಾಲೆಗೆ ಬರುತ್ತಾರೆ. ನಂತರ ಮಧ್ಯಾಹ್ನ ಒಂದು ಬಸ್ ಗೋಯರ್‌ಗೆ ಕಾರವಾರದಿಂದ ತೆರಳುತ್ತದೆ. ಸಂಜೆ ಈ ಮಕ್ಕಳು ವಾಪಸ್ ಊರಿಗೆ ಹೋಗಲು ಇನ್ನೊಂದು ಬಸ್ ಸೌಲಭ್ಯವಿದೆ.

ಆದರೆ, ಈ ಬಸ್‌ಗಳು ಪದೇಪದೆ ಕೈಕೊಡುತ್ತಿವೆ. ಕನಿಷ್ಠ ಪಕ್ಷ ಶಾಲಾ ಮಕ್ಕಳನ್ನು ಕರೆದೊಯುಲು ಒಳ್ಳೆಯ ಸುಸ್ಥಿತಿಯಲ್ಲಿರುವ ಬಸ್ ಕಳಿಸಬೇಕು ಎಂಬ ಅರಿವು ಕಾರವಾರದ ಡಿಪೋ ಮ್ಯಾನೇಜರ್‌ಗೆ ಇಲ್ಲದಂತಾಗಿದೆ. ರಾಜಕಾರಣಿಗಳ ಬೆಂಬಲದಿಂದಲೇ ತಮಗೆ ಆಗಿರುವ ವರ್ಗಾವಣೆಗಳನ್ನು ರದ್ದುಪಡಿಸಿಕೊಂಡು ಕಾರವಾರದಲ್ಲಿ ಠಿಕಾಣಿ ಹೂಡಿದ್ದಾರೆ ಡಿಪೋ ಮ್ಯಾನೇಜರ್.

Megha
the authorMegha

Leave a Reply

error: Content is protected !!