NEWSನಮ್ಮಜಿಲ್ಲೆನಮ್ಮರಾಜ್ಯ

ಎಸ್ಸಿ, ಎಸ್ಟಿ ಜನಸಂಖ್ಯೆ ಪ್ರಮಾಣದಷ್ಟೇ ಬಜೆಟ್‌ನಲ್ಲೂ ಹಣ ಮೀಸಲಿಡುವ ಕಾಯ್ದೆ ಮಾಡಿದ್ದು ನನ್ನದೇ ಸರ್ಕಾರ: ಸಿದ್ದರಾಮಯ್ಯ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಬೆಂಗಳೂರು: ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಜನಸಂಖ್ಯೆ ಪ್ರಮಾಣದಷ್ಟೇ ಅಭಿವೃದ್ಧಿ ಬಜೆಟ್‌ನಲ್ಲೂ ಹಣ ಮೀಸಲಿಡಲು ಕಾಯ್ದೆ ಮಾಡಿದ್ದು ನನ್ನದೇ ನೇತೃತ್ವದ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು (ಅ.7) ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಹೋಬಳಿಗೊಂದರಂತೆ ವಸತಿ ಶಾಲೆ, ಮೊರಾರ್ಜಿ ದೇಸಾಯಿ ಶಾಲೆಗಳನ್ನು ಮಾಡಿದ್ದು ಇದೇ ಸಿದ್ದರಾಮಯ್ಯ. ಹೀಗಾಗಿ ಈ ಇತಿಹಾಸವನ್ನೆಲ್ಲ ಚೆನ್ನಾಗಿ ತಿಳಿದುಕೊಳ್ಳಿ. ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇದ್ದಾರೋ ಅವರ ಪರವಾಗಿ ವಾಲ್ಮೀಕಿ ಸಮುದಾಯ ನಿಲ್ಲಬೇಕು ಎಂದರು.

ಇನ್ನು ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ.

ಉಗ್ರಪ್ಪ ಮತ್ತು ದೇವೇಗೌಡರ ನಡುವಿನ‌ ಒಡನಾಟ ಆಗಲೂ ಚೆನ್ನಾಗಿತ್ತು, ಈಗಲೂ ಚನ್ನಾಗಿದೆ. ದೇವೇಗೌಡರು ಮತ್ತು ಚಂದ್ರಶೇಖರ್ ಅವರ ಒಡನಾಡ ಚನ್ನಾಗಿತ್ತು. ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ಎಸ್ಟಿಗೆ ಸೇರಿಸಿದರು ಎಂದು ಹೇಳಿದರು.

ವಾಲ್ಮೀಕಿ, ಬೇಡ ಮತ್ತು ನಾಯಕ‌ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು. ಈಗ ಕುರುಬರನ್ನು ಎಸ್ಟಿಗೆ ಸೇರಿಸಲು ಹೋರಾಟ ಮಾಡಿದವರು ನಾವಲ್ಲ. ಬಿಜೆಪಿಯ ಈಶ್ವರಪ್ಪ ಹೋರಾಟ ಮಾಡಿದರು. ಸಿಎಂ ಆಗಿದ್ದ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಆ ಶಿಫಾರಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ ಎಂದು ತಿಳಿಸಿದರು.

ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತವೂ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು. ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ. ಜೆ.ಎಚ್.ಪಟೇಲರು ಸಿಎಂ ಆಗಿದ್ದಾಗ ಬೆಸ್ತರು ಸೇರಿ ಹಲವು ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಇವತ್ತಿನವರೆಗೂ ಇದು ಸಾಧ್ಯವಾಗಿಲ್ಲ ಎಂದರು.‌

Advertisement

ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಶೋಷಿತ ಸಮುದಾಯದ ವಾಲ್ಮೀಕಿ ಅವರು ವಿಶ್ವ ಮಾನವರಾಗಿ, ಶ್ರೇಷ್ಠವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಹೀಗಾಗಿ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣವನ್ನು ಆದ್ಯತೆಯಾಗಿ ಪರಿಗಣಿಸಬೇಕು. ವಾಲ್ಮೀಕಿ ಅವರ ಬಗ್ಗೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ಉಗ್ರಪ್ಪ ಅವರ ಬೇಡಿಕೆ ಬಗ್ಗೆಯೂ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

Megha
the authorMegha

Leave a Reply

error: Content is protected !!