ಸಾರಿಗೆ 3 ನಿಗಮಗಳ ನೌಕರರಿಗೆ ಗುಡ್‌ನ್ಯೂಸ್: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಶೀಘ್ರದಲ್ಲೇ ಜಾರಿ- ರಾಮಲಿಂಗಾರೆಡ್ಡಿ


ಬೆಂಗಳೂರು: ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಅಧಿಕಾರಿಗಳು/ ನೌಕರರಿಗೆ ಜಾರಿಗೆ ತಂದಿರುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ಉಳಿದ ಮೂರು ಸಾರಿಗೆ ನಿಗಮಗಳಲ್ಲೂ ಶೀಘ್ರವಾಗಿ ಜಾರಿಗೆ ತರಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಾರಿಗೆ ನೌಕರರ ಹಲವು ವರ್ಷಗಳ ಅತೀ ಮುಖ್ಯ ಬೇಡಿಕೆಗಳಲ್ಲಿ ಒಂದಾಂದ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ಕೆಎಸ್ಆರ್ಟಿಸಿ ನಿಗಮದಲ್ಲಿ ಕಳೆದ ಜನವರಿ 6-2025 ರಂದು ಮುಖ್ಯಮಂತ್ರಿಗಳು ಉದ್ಘಾಟಿಸುವ ಮೂಲಕ ಚಾಲನೆ ನೀಡಿದ್ದಾರೆ.
ಆ ವೇದಿಕೆಯಲ್ಲಿ ತಾವು ಮಾತನಾಡಿದ ಸಂದರ್ಭದಲ್ಲಿ ಮಾರ್ಚ್ 2025ರ ಒಳಗೆ ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿಯ ಈ ಮೂರು ನಿಗಮಗಳಲ್ಲಿ ಈ ಯೋಜನೆ ಜಾರಿಗೆ ತರಬೇಕೆಂದು ಹೇಳಿದ್ದೀರಿ.
ಆದರೆ, ಈಗಾಗಲೇ ಸುಮಾರು 8 ತಿಂಗಳುಗಳು ಕಳೆದಿದ್ದು, ಈ ಮೂರು ನಿಗಮಗಳ ನೌಕರರು ಮತ್ತು ಕುಟುಂಬ ಸದಸ್ಯರು ಯಾವಾಗ ನಮ್ಮ ನಿಗಮಕ್ಕೆ ಈ ನಗದು ರಹಿತ ಆರೋಗ್ಯ ಭಾಗ ಯೋಜನೆ ಜಾರಿಗೆ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಆದ್ದರಿಂದ ಕೆಎಸ್ಆರ್ಟಿಸಿ ನಿಗಮದಲ್ಲಿ ಜಾರಿಗೆ ತಂದಿರುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯನ್ನು ಈ ಮೂರು ಸಾರಿಗೆ ನಿಗಮಗಳಲ್ಲಿ ಶೀಘ್ರವಾಗಿ ಜಾರಿಗೆ ತರಬೇಕೆಂದು ಸಮಸ್ತ ಸಾರಿಗೆ ನೌಕರರ ಮತ್ತು ಕುಟುಂಬ ಸದಸ್ಯರ ಪರವಾಗಿ ಮನವಿ ಮಾಡಿದ್ದಾರೆ.
ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ನೇತೃತ್ವದಲ್ಲಿ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸಸ್ವೀಕರಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ನಾವು ಈಗಾಗಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಡಿಸೆಂಬರ್ ವೇಳೆಗೆ ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿಯ ಮೂರು ನಿಗಮಗಳಲ್ಲಿ ಎಚ್‌ಆರ್‌ಎಂಎಸ್ (HRMS) ಪೂರ್ಣ ಪ್ರಮಾಣದಲ್ಲಿ ಅಳವಡಿಕೆ ಆಗಲಿದ್ದು, 2026ರ ಜನವರಿ ಮೊದಲ ವಾರದಲ್ಲೇ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಏನು ಕೆಎಸ್‌ಆರ್‌ಟಿಸಿ ನಿಗಮದಂತೆ ಈ ಮೂರು ನಿಗಮಗಳ ನೌಕರರಿಗೆ ಯೋಜನೆಯನ್ನು ವಿಧಾನಸೌಧದಲ್ಲೇ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುವ ಮೂಲಕ ರಹಿತ ವೈದ್ಯಕೀಯ ಚಿಕಿತ್ಸೆಗೆ ಚಾಲನೆ ನೀಡುವರು ಎಂದು ತಿಳಿಸಿದ್ದಾರೆ.
ಕೂಟದ ಪದಾಧಿಕಾರಿಗಳಾದ ಲೋಕೇಶ್, ಶ್ರೀನಿವಾಸ್, ಅಂಬರೀಶ್ ಸೇರಿದಂತೆ ಹಲವು ಇದ್ದರು.
Related
