ಬೆಂಗಳೂರು: ಎಟಿಎಂಗಳಿಗೆ ಸ್ಕೀಮರ್ ಮೆಷಿನ್ ಅಳವಡಿಸಿ ಗ್ರಾಹಕರ ಡಾಟಾಗಳನ್ನು ಕಳವು ಮಾಡಿ ಹಣ ದೋಚಲು ಯತ್ನಿಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಆರ್ಟಿ ನಗರ ಪೊಲೀಸರು ಬಂಧಿಸಿದ್ದಾರೆ.
ಯಲಹಂಕದ ಕೋಗಿಲು ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಉಗಾಂಡಾದ ಫೆಲಿಕ್ಸ್ ಕಿಸ್ಸಿಬೋ (25) ಮತ್ತು ತಾಂಜೇನಿಯಾದ ಖೈರುನ್ ಅಬ್ದುಲ್ಲಾ (32) ಬಂಧಿತ ಆರೋಪಿಗಳು.
ಆರೋಪಿಗಳಿಂದ 12 ವಿವಿಧ ಬ್ಯಾಂಕ್ಗಳ ಎಟಿಎಂ ಕಾರ್ಡ್ ಗಳು, ಮೂರು ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್, ಸ್ಕೀಮರ್ ಮೆಷಿನ್, ಲೋಡರ್, ರಹಸ್ಯ ಕ್ಯಾಮೆರಾ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯೂನಿಯನ್ ಬ್ಯಾಂಕ್ ನ ಗಂಗಾನಗರ ಶಾಖೆಯ ವ್ಯವಸ್ಥಾಪಕ ಶ್ರೀನಿವಾಸ್ ರೆಡ್ಡಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಬ್ಯಾಂಕ್ ಎಟಿಎಂ ಪ್ರವೇಶಿಸಿ ಸ್ಕೀಮರ್ ಮೆಷಿನ್ ಮತ್ತು ಹಲವು ಎಟಿಎಂ ಕಾರ್ಡ್ಗಳನ್ನು ಹಿಡಿದುಕೊಂಡು ಹಣ ಡ್ರಾ ಮಾಡುತ್ತಿದ್ದದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಆಧಾರದ ಮೇಲೆ ಬಂಧಿಸಿರುವ ಪೊಲೀಸರು ಸೈಬರ್ ಕಾಯಿದೆ ಮತ್ತು ವಂಚನೆ ಪ್ರಕರಣದಡಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲು ಮಾಡಿ ಮುಂದಿನ ಕ್ರಮ ಜರುಗಿಸಿದ್ದಾರೆ.
Ivarnella oddu hodisodbittu kate keli helthare chandavagi