ಹುಣಸೂರು: ಸಿಮೆಂಟ್ ತುಂಬಿದ ಲಾರಿ ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಮೂವರು ಸಾವನ್ನಪ್ಪಿರುವ ಘಟನೆ ಮೈಸೂರು ಕೊಡಗು ಹೆದ್ದಾರಿಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮದುಗಿರಿ ಕೊಪ್ಪಲ್ ಗೇಟಿನ ಬಳಿ ಬೆಳಗಿನ ಜಾವ 4:30 ನಡೆದ ಘಟನೆ ನಡೆದಿದ್ದು, ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಅಪಘಾತದ ಭೀಕರತೆಗೆ ಬಸ್ ಚಾಲಕ ಹಾಗೂ ಕ್ಲೀನರ್ ಸೇರಿ ಮತ್ತೊಬ್ಬರು ಮೃತಪಟ್ಟಿದ್ದು, ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮೈಸೂರಿನಿಂದ ಹುಣಸೂರಿನ ಕಡೆಗೆ ಬರುತ್ತಿದ್ದ ಸಿಮೆಂಟ್ ತುಂಬಿದ್ದ ಲಾರಿ- ಕೇರಳ ಕಡೆಯಿಂದ ಬರುತ್ತಿದ್ದ ಬಸ್ ನಡುವೆ ಡಿಕ್ಕಿಯಾಗಿದೆ. ಬಸ್ ಕ್ಯಾಲಿಕಟ್‌ನಿಂದ ಬೆಂಗಳೂರಿಗೆ ತೆರಳುತ್ತಿತ್ತು.
ಬಸ್ ಚಾಲಕ, ಕ್ಲಿನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರ ಬಗ್ಗೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಇನ್ನು ಹೆದ್ದಾರಿಯಲ್ಲಿ ಬಿದಿದ್ದ ಮರಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಿಮೆಂಟ್ ಲಾರಿ ಪಲ್ಟಿಯಾಗಿದೆ. ಅಪಘಾತಕ್ಕೊಳಗಾದ ಎರಡೂ ವಾಹನಗಳು ಕೇರಳ ಮೂಲದ್ದಾಗಿದೆ.

ಮೃತದೇಹಗಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯಿಂದ ಬೆಳಗ್ಗೆ 8 ಗಂಟೆಯವರೆವಿಗೂ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಬಂದು ವಾಹನಗಳ ತೆರವು ಮಾಡುವ ಮೂಲಕ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
Related
